Monday, January 13, 2025
Homeಉಡುಪಿಉಡುಪಿ ಕೃಷ್ಣಮಠದ ಎತ್ತು ರಾಮ ನಿರ್ಯಾಣ

ಉಡುಪಿ ಕೃಷ್ಣಮಠದ ಎತ್ತು ರಾಮ ನಿರ್ಯಾಣ

ಉಡುಪಿ ಶ್ರೀ ಕೃಷ್ಣಮಠದ ಗೋಶಾಲೆಯಲ್ಲಿ ತನ್ನ ಆಕರ್ಷಕ ಬೃಹತ್ ಗಾತ್ರದ ದೇಹ , ಬಿಳಿ ಬಣ್ಣ , ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಸಾಧು ಸ್ವಭಾವದಿಂದ ಸಾವಿರಾರು ಭಕ್ತರ ಮನಸೂರೆಗೊಂಡಿದ್ದ ಓಂಗೋಲ್ ತಳಿಯ ಎತ್ತು ರಾಮ‌ ಮೂರು ದಿನಗಳ ಹಿಂದೆ ಹಠಾತ್ತಾಗಿ ಕೊನೆಯುಸಿರೆಳೆದ ಮಾಹಿತಿ ತಿಳಿದೇ ಅತ್ಯಂತ ದುಃಖಿತನಾದೆ ; ಮನಸ್ಸಿನಲ್ಲಿ ಅತ್ಯಂತ ಸಂಕಟದ ಅನುಭೂತಿ

2016 ರಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪರ್ಯಾಯದ ಹೊತ್ತಲ್ಲಿ ಶ್ರೀ ಮಠದಲ್ಲೇ ಜನ್ಮ ತಳೆದ ಒಂಗೋಲ್ ಶುದ್ಧ ತಳಿಯ ಗಂಡು ಕರುವಿಗೆ ಶ್ರೀಗಳವರೇ ರಾಮ ಎಂದು ಹೆಸರಿಟ್ಟಿದ್ದರು . ತನ್ನ ತುಂಟಾಟ ಮುದ್ದಾಟಗಳಿಂದ ಪೇಜಾವರ ಉಭಯ ಶ್ರೀಗಳೂ ಸೇರಿದಂತೆ ಎಲ್ಲ ಮಠಾಧೀಶರು, ಮಠದ ಗೋಶಾಲೆಯ ಗೋಪಾಲಕರು ಹಾಗೂ ಭಕ್ತಾದಿಗಳ ಅಪಾರ ಪ್ರೀತಿ ವಾತ್ಸಲ್ಯಗಳಿಗೆ ಪಾತ್ರನಾಗಿದ್ದ ರಾಮ . ದಿನಗಳೆದಂತೆ ಆಳೆತ್ತರಕ್ಕೆ ಬೆಳೆದು ಪ್ರಾಯಪ್ರಬುದ್ಧನಾದರೂ ಇನ್ನಿಲ್ಲವೆಂಬಂಥ ತನ್ನ ಸಾಧು ಸ್ವಭಾವ , ಬಿಳಿಯಾದ ಮೈಬಣ್ಣ ಎತ್ತರದ ಗಾತ್ರಗಳಿಂದ ಗೋಶಾಲೆಯ ಆಕರ್ಷಣೆಯ ಕೇಂದ್ರವೂ ಆದ . ಯಾವತ್ತೂ ಗೋಪಾಲಕರು , ನಿತ್ಯ ಗೋಪೂಜೆಗೆ ಬರುವ ಸ್ವಾಮೀಜಿಯವರು , ಗಣ್ಯರು , ಅಸಂಖ್ಯ ಭಕ್ತರು ಹೀಗೆ ಯಾರೊಬ್ಬರಿಗೂ ಹಾಯದೇ , ಹ್ಞೂಂ ಕರಿಸದೇ ಎಲ್ಲರ ಪ್ರೀತಿಗೂ ಪಾತ್ರನಾದ ; ತಾನೂ ಪ್ರೀತಿ ಕೊಟ್ಟ . ಹೀಗಾಗಿ ಕಳೆದ ಎಂಟು ವರ್ಷಗಳಲ್ಲಿ ಗೋಶಾಲೆಗೆ ಭೇಟಿ ನೀಡಿದ ಸಾವಿರಾರು ಭಕ್ತರ ಸೆಲ್ಫಿಗಳಲ್ಲಿ ರಾಮ ಸೆರೆಯಾದ…!!

ಮಠದ ಪರಿಸರ ಇತ್ತೀಚಿನ ದಿನಗಳಲ್ಲಿ ಗೋವುಗಳಿಗೆ ಸಹಜವಾದ ನೈಸರ್ಗಿಕ ಪರಿಸರಗಳಿಂದ ದೂರವಾಗಿ ಕಾಂಕ್ರೀಟೀಕರಣದ ಕಬಂಧಬಾಹುವಿನಲ್ಲಿ ಸಿಲುಕುತ್ತಿರುವ ಸಂದರ್ಭದಲ್ಲೂ ಮಠದ ಗೋಪಾಲಕರು ಹರಸಾಹಸ ಪಟ್ಟು ಪ್ರತಿದಿನವಲ್ಲದಿದ್ದರೂ ವಾರಕ್ಕೆರಡು ಮೂರು ದಿನಗಳಲ್ಲಿ ಆಸುಪಾಸಿನಲ್ಲೇ ಕೆಲ ದೂರ ಒಂದು ನೂರರಷ್ಟಿರುವ ಹಸು ಕರುಗಳನ್ನು ಹಸಿರು ಹುಲ್ಲು ಮಠಗಳಿರುವೆಡೆ ಕರೆದುಕೊಂಡು ಹೋಗಿ ಬರುವ ಸೇವೆಯನ್ನು ಎಷ್ಟು ಬಣ್ಣಿಸಿದರೂ ಕಡಿಮೆ . ಹಾಗೆ ಈ ರಾಮನೂ ಹಾಗೂ ಒಂದು ವರ್ಷದ ನಂತರ ಮಠದಲ್ಲೆ ಹುಟ್ಟಿ, ಇವನ ಜೊತೆಯಾದ ಕೃಷ್ಣ ( ಅದೂ ಒಂಗೋಲ್ ತಳಿಯ ಆಳೆತ್ತರದ ಎತ್ತು) ಉಳಿದ ಹಸುಗಳ ಜೊತೆ ಒಂದಷ್ಟು ಸುತ್ತಾಡಿಕೊಂಡು ಸಂತೋಷ ಪಡುತ್ತಿದ್ದುದನ್ನು ಗೋವಿನ ಸಂವೇದನೆ ಇರುವ ಎಲ್ಲರೂ ಗಮನಿಸಿದ್ದರು .‌

ನಿತ್ಯ ಸಾಯಂಕಾಲದ ವೇಳೆ ಗೋಪಾಲಕರು ರಾಮ ಮತ್ತು ಕೃಷ್ಣರನ್ನು ರಥಬೀದಿಯಲ್ಲಿ ಸುತ್ತಾಡಿಸಿಕೊಂಡು ಬರುತ್ತಿದ್ದುದೂ ಭಕ್ತರ ಕಣ್ಣಿಗೆ ಮುದ ಕೊಡುವ ದೃಶ್ಯವಾಗಿತ್ತು ಬೀದಿಗಳ ವ್ಯಾಪಾರಿಗಳು ವ್ಯವಹಾರಸ್ಥರೂ ಇಬ್ಬರಿಗೂ ಹಣ್ಣು ಹಂಪಲುಗಳನ್ನು ಕೊಟ್ಡು ಮೈದಡವಿ ಕಳುಹಿಸುತ್ತಿದ್ದುದು ಸಾಮಾನ್ಯವಾಗಿತ್ತು .‌
ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ಅಪೇಕ್ಷೆಯಂತೆ ಅಂದ ಚೆಂದದ ಅಲಂಕಾರಿಕ ಹೊಸ ಬಟ್ಟೆ ತರಿಸಿ ತೊಡಿಸಿ ನಿತ್ಯದ ಶ್ರೀ ಕೃಷ್ಣನ ಉತ್ಸವದಲ್ಲೂ ರಥದೊಂದಿಗೆ ಸಾಗಿಬರುವ ವ್ಯವಸ್ಥೆ ಮಾಡಿದ್ದರು . ಆ ದೃಶ್ಯವಂತೂ ರಥೋತ್ಸವಕ್ಕೇ ಒಂದು ಮೆರುಗು ತಂದಿತ್ತು . ನಂತರದ ವರ್ಷಗಳಲ್ಲಿ ಆ ಪದ್ಧತಿ ನಿಂತು ಹೋಗಿತ್ತು .

ಅಂತೂ ತನ್ನ ಆಯುಷ್ಯ ಪರ್ಯಂತ ಶ್ರೀ ಗೋಪಾಲಕೃಷ್ಣನ ಸೇವೆಯನ್ನು ಶ್ರದ್ಧೆಯಿಂದ ಕೃಷ್ಣನೂ , ಕೃಷ್ಣ ಭಕ್ತರೂ ಮೆಚ್ಚುವ ರೀತಿ ಸೇವೆಗೈದು ಸಾರ್ಥಕ ಜೀವನ ಕಂಡಿದ್ದ ರಾಮ ಮೂರು ದಿನಗಳ ಹಿಂದೆ ಉಳಿದ ಹಸುಗಳ ಜೊತೆ ಮಠದ ಸಮೀಪದ ಮೈದಾನದಲ್ಲಿ ವಿಹರಿಸುತ್ತಿದ್ದಾಗ ಹಠಾತ್ತಾಗಿ ಬಿದ್ದವನು ಮೇಲೇಳಲೇ ಇಲ್ಲ ಭಟ್ರೇ ..ಅಂತ ಗೋಪಾಲಕರು ಕಣ್ಣೀರು ಹಾಕುತ್ತಲೇ ಇವತ್ತು ಸಂಜೆ ನನ್ನನ್ನು ಕರೆದು ಹೇಳಿದಾಗ ಆಘಾತವಾಗಿ ನನ್ನ ಕಣ್ಣಲ್ಲೂ ನೀರು ತಾನೇ ತಾನಾಗಿ ಹರಿದು ಬಂತು. ಇದಕ್ಕೆ ಕಾರಣ ಜೀವನಪರ್ಯಂತ ರಾಮ ಮೌನದಿಂದಲೇ ನಮಗೆ ನೀಡಿದ ಪ್ರೀತಿ ,ಆನಂದ..!!
ಹೇ ರಾಮ ..ಕೃಷ್ಣನ ಪಾದ ಮೂಲದಲ್ಲಿ ಹುಟ್ಟಿ ಬೆಳೆದು ಉಸಿರಿರುವ ವರೆಗೂ ಕೃಷ್ಣ ಸೇವೆಗೈದು ಧನ್ಯನಾದೆ ..
ನಿನ್ನಾತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ.. ಓಂ ಶಾಂತಿಃ

ಜಿ ವಾಸುದೇವ ಭಟ್ ಪೆರಂಪಳ್ಳಿ

RELATED ARTICLES
- Advertisment -
Google search engine

Most Popular