ಉಡುಪಿ: ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆಗೈದಿದ್ದಾನೆ ಎನ್ನಲಾದ ಘಟನೆ ಇಂದು ಮುಂಜಾನೆ ನಡೆದಿದೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪತ್ನಿ ಜಯಶ್ರೀ (31)ಯನ್ನು ಪತಿ ಕಿರಣ್ ಉಪಾಧ್ಯಾಯ ಎಂಬಾತ ಹತ್ಯೆ ಕತ್ತಿಯಿಂದ ಕಡಿದು ಹತ್ಯೆ ಮಾಡಿದ್ದಾನೆ ಎಂದು ವರದಿಗಳಾಗಿವೆ.
ಪತ್ನಿಯ ಹತ್ಯೆ ನಡೆಸಿ ಮನೆಯಲ್ಲೇ ಕೂತಿದ್ದ ಕಿರಣ್‌ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಜಯಶ್ರೀ ಬೀದರ್ ಜಿಲ್ಲೆಯ ದೊಣಗಪುರ ಮೂಲದವರು ಎನ್ನಲಾಗಿದೆ. ಗುಂಡ್ಮಿ ಗ್ರಾಮದ ಕಿರಣ್ ಗುರು ನರಸಿಂಹ ದೇವಸ್ಥಾನದಲ್ಲಿ ಕಳೆದ ಎರಡು ವರ್ಷಗಳಿಂದ ಅಡುಗೆ ಕೆಲಸ ಮಾಡುತ್ತಿದ್ದರು. ಕಳೆದ ಎರಡು ಮೂರು ತಿಂಗಳ ಹಿಂದೆ ಇಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಇವರ ಮದುವೆ ನಡೆದಿತ್ತು ಎಂದು ತಿಳಿದುಬಂದಿದೆ.
ಮೃತ ಜಯಶ್ರೀ ಸದಾ ಮೊಬೈಲ್‌ನಲ್ಲಿ ಬ್ಯುಸಿ ಇರುತ್ತಿದ್ದರು. ರೀಲ್ಸ್ ಮಾಡುವ ಹವ್ಯಾಸವಿದ್ದ ಜಯಶ್ರೀ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಪತ್ನಿಯ ಮೊಬೈಲ್ ಗೀಳು ಪತಿ, ಪತ್ನಿಯ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಗಂಡ ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಅದು ಕೊಲೆಯಲ್ಲಿ ಅಂತ್ಯವಾಗಿರುವ ಅನುಮಾನ ವ್ಯಕ್ತವಾಗಿದೆ ಎಂದು ವರದಿಯೊಂದು ತಿಳಿಸಿದೆ.