Monday, February 10, 2025
Homeಉಡುಪಿಉಡುಪಿ | ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು | ರಾತ್ರಿ 12 ಗಂಟೆಗೆ ಕಳೆದುಕೊಂಡ ಅರ್ಚಕರೊಬ್ಬರ...

ಉಡುಪಿ | ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು | ರಾತ್ರಿ 12 ಗಂಟೆಗೆ ಕಳೆದುಕೊಂಡ ಅರ್ಚಕರೊಬ್ಬರ ನಗದು ಸಹಿತ ಬ್ಯಾಗ್‌ ಕೆಲವೇ ಗಂಟೆಗಳಲ್ಲಿ ಪತ್ತೆ!

ಉಡುಪಿ: ಅರ್ಚಕರೊಬ್ಬರ ನಗದು ಸಹಿತ ಬ್ಯಾಗ್‌ ಒಂದು ಕಳೆದು ಹೋದ ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚುವ ಮೂಲಕ ಉಡುಪಿ ಎಸ್ಪಿ ಕಚೇರಿಯ ಕಂಟ್ರೋಲ್‌ ರೂಂ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರ್ಯಾಯ ಅರ್ಚಕ ಶ್ರೀಧರ ತಂತ್ರಿ ಕಳತ್ತೂರು ಅವರು ಸೋಮವಾರ ರಾತ್ರಿ 11 ಗಂಟೆಗೆ ಮಂಗಳೂರಿನಿಂದ ಶಿರಸಿಗೆ ಹೋಗುವ ಸರಕಾರಿ ಬಸ್ಸು ಹತ್ತಿದ್ದರು. ರಾತ್ರಿ 12 ಗಂಟೆ ವೇಳೆಗೆ ಕಾಪುವಿನಲ್ಲಿ ಇಳಿದಿದ್ದಾರೆ. ಆದರೆ ಬಸ್ಸಿನಿಂದ ಇಳಿಯುವ ಗಡಿಬಿಡಿಯಲ್ಲಿ ರೂ. 18,000 ಇದ್ದ ಬ್ಯಾಗ್‌ ಒಂದನ್ನು ಬಸ್ಸಿನಲ್ಲಿಯೇ ಮರೆತಿದ್ದರು. ತಕ್ಷಣ ಅವರು ಶಿರ್ವ ಠಾಣೆಗೆ ದೂರು ನೀಡಿದರು. ದೂರು ಸ್ವೀಕರಿಸಿದ ಶಿರ್ವ ಠಾಣೆ ಪೊಲೀಸರು ಕೂಡಲೇ ವಯರ್‌ಲೆಸ್‌ ಮೂಲಕ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ್ದರು.
ಉಡುಪಿ ಎಸ್ಪಿ ಕಚೇರಿಯ ಕಂಟ್ರೋಲ್‌ ರೂಂನಲ್ಲಿ ಕರ್ತವ್ಯದಲ್ಲಿದ್ದ ಎಸ್‌ಐ ನಿತ್ಯಾನಂದ ಶೆಟ್ಟಿ ಹಾಗೂ ಕಂಟ್ರೋಲ್‌ ರೂಂ ಸಿಬ್ಬಂದಿ ರಾತ್ರಿಯೇ ಎಲ್ಲಾ ಠಾಣೆಗೂ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ತಕ್ಷಣವೇ ಬೈಂದೂರು ಪೊಲೀಸ್‌ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೈಂದೂರು ಬಸ್ಸು ನಿಲ್ದಾಣದಲ್ಲಿ ರಾತ್ರಿ ಊಟಕ್ಕೆ ನಿಲ್ಲಿಸಿದ್ದ ಬಸ್ಸನ್ನು ಪರಿಶೀಲಿಸಿ ಬ್ಯಾಗ್‌ ಪತ್ತೆ ಮಾಡಿ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ್ದರು. ರಾತ್ರಿ 1.30ರ ಸುಮಾರಿಗೆ ಬ್ಯಾಗ್‌ ಕಳೆದುಕೊಂಡ ಶ್ರೀಧರ ತಂತ್ರಿ ಅವರಿಗೆ ಬ್ಯಾಗ್‌ ಸಿಕ್ಕಿದ ಮಾಹಿತಿ ತಿಳಿಸಲಾಯಿತು.

RELATED ARTICLES
- Advertisment -
Google search engine

Most Popular