ಭಾರತೀಯ ಅಂಚೆ ಇಲಾಖೆಯ ಉಡುಪಿ ವಿಭಾಗದ ವತಿಯಿಂದ ದಿನಾಂಕ 23-ನವೆಂಬರ್-2024 ರ ಶನಿವಾರ ಬೆಳಿಗ್ಗೆ 0900 ರಿಂದ ಸಂಜೆ 0530 ರವರೆಗೆ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ ಇವರ ಸಹಯೋಗದಲ್ಲಿ ಉಡುಪಿಯ ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಡಾಕ್-ಸೇವಾ; ಜನ್-ಸೇವಾ-ಅಂಚೆ ಜನ ಸಂಪರ್ಕ ಅಭಿಯಾನ” ವು ನಡೆಯಿತು. ಅಭಿಯಾನವನ್ನು ದೀಪ ಬೆಳಗಿಸಿ ಉಧ್ಘಾಟಿಸಿ, ಚಾಲನೆ ನೀಡಿದ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಅಂಚೆ ಆಧಾರ್ ಕ್ಯಾಂಪ್ ನಲ್ಲಿ ಆಧಾರ್ ಕಾರ್ಡ್ ಮಾಡಿಸಿದ ಪ್ರಥಮ ನಾಗರಿಕ ತಾನಾಗಿದ್ದು, ಎಲ್ಲಾ ಕಡೆಗಳಲ್ಲಿ ಈ ರೀತಿಯ ಅಭಿಯಾನಗಳನ್ನು ನಡೆಸಿ, ಜನರಿಗೆ ನೆರವಾಗುತ್ತಿರುವ ಉಡುಪಿ ಅಂಚೆ ವಿಭಾಗವನ್ನು ಶ್ಲಾಘಿಸಿದರು. ಅಭಿಯಾನದ ನೇತೃತ್ವ ವಹಿಸಿದ್ದ ಉಡುಪಿ ದಕ್ಷಿಣ ಉಪ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ಪ್ರಸ್ತಾವನೆಗೈದು, ವಿವಿಧ ಅಂಚೆ ಸೇವೆಗಳ ಮಾಹಿತಿ ನೀಡಿದರು. ಅಂಚೆ ಅಧೀಕ್ಷಕ ರಮೇಶ್ ಪ್ರಭು ಉಪಸ್ಥಿತರಿದ್ದು, ಆಯೋಜಕರ ಇಂತಹ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರಲ್ಲದೇ, ಸ್ಥಳಾವಕಾಶಕ್ಕಾಗಿ ಶಾಲಾ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು. ನೂರಾರು ಗ್ರಾಹಕರು-ಪೋಷಕರು-ಶಾಲಾ ಮಕ್ಕಳು ಒಂದೇ ಸೂರಿನಡಿ ಹಲವಾರು ಅಂಚೆ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಂಡರು.