ಉಡುಪಿ: ಐಟಿ ಅಧಿಕಾರಿಗಳು, ಪೊಲೀಸರ ಸೋಗಿನಲ್ಲಿ ತೆಕ್ಕಟ್ಟೆ ಮಣೂರಿನ ಮನೆಯೊಂದಕ್ಕೆ ದಾಳಿ ನಡೆಸಿ, ದೋಚಲು ಮುಂದಾಗಿದ್ದ ತಂಡವೊಂದರ ಇಬ್ಬರನ್ನು ಮುಂಬೈಯಲ್ಲಿ ಬಂಧಿಸಿ ಕರೆ ತರಲಾಗಿದೆ. ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸಲು ತಂಡ ಯೋಜಿಸಿತ್ತು ಎನ್ನಲಾಗಿದೆ.
ಚಿಕ್ಕಮಗಳೂರು ಮೂಲದ, ಪ್ರಸ್ತುತ ಮುಂಬೈಯಲ್ಲಿರುವ ಸಂತೋಷ್ ನಾಯಕ್ (45). ಮೂಲತಃ ಕಾಪು ನಿವಾಸಿ, ಪ್ರಸ್ತುತ ಮುಂಬೈಯಲ್ಲಿರುವ ದೇವರಾಜ ಸುಂದರ್ ಮೆಂಡನ್ ಬಂಧಿತರು. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜು. 25ರಂದು ಬೆಳಿಗ್ಗೆ 8.30ಕ್ಕೆ ಮಣೂರು ನಿವಾಸಿ ಸುಧೀಂದ್ರ ಪೂಜಾರಿಯವರ ಮನೆಯ ಹೊರಗಿನಿಂದ ಬಾಗಿಲು ಬಡಿದ ಶಬ್ದವಾಯಿತು. ಮನೆಯಲ್ಲಿ ಸುಧೀಂದ್ರ ಅವರ ಪತ್ನಿ ಕವಿತಾ ಮಾತ್ರ ಇದ್ದರು. ನಂತರ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೆಕ್ಯುರಿಟಿ ಸಂಸ್ಥೆಯವರು ಕರೆ ಮಾಡಿ, ಮನೆಗೆ ನುಗ್ಗಲು ಯತ್ನಿಸಿದ್ದ ತಂಡದ ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಎಂಟು ಆರೋಪಿಗಳಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಇನ್ನುಳಿದ ಆರು ಮಂದಿಯ ಪತ್ತೆಗೆ ಬಲೆ ಬೀಸಲಾಗಿದೆ.