Thursday, December 5, 2024
Homeಉಡುಪಿಉಡುಪಿ | ಪ್ರಧಾನಿ ಕಾರ್ಯಾಲಯದ ಅಧಿಕಾರಿ ಸೋಗಿನಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ವಂಚನೆ

ಉಡುಪಿ | ಪ್ರಧಾನಿ ಕಾರ್ಯಾಲಯದ ಅಧಿಕಾರಿ ಸೋಗಿನಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ವಂಚನೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿಯ ಸೋಗಿನಲ್ಲಿ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಕರೆ ಮಾಡಿ, ವಿಶೇಷ ದರ್ಶನಗೈದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಅ.9ರಂದು ಉದಯ್‌ ಎನ್ನುವಾತ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ್‌ ಆಚಾರ್ಯ ಅವರಿಗೆ ಕರೆ ಮಾಡಿ, ತಾನು ಪ್ರಧಾನಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ನಾವು ಕುಟುಂಬ ಸಮೇತ ಮಠಕ್ಕೆ ಆಗಮಿಸುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದರು.
ಆ ಪ್ರಕಾರ, ಅ.9ರಂದು ಭಾರತ ಸರಕಾರ ಎಂದು ಬರೆದ ಇನೋವ ಕಾರಲ್ಲಿ ಆಗಮಿಸಿದ ಡಾ. ಉದಯ್‌ ಹಾಗೂ ಕುಟುಂಬಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಅ.10ರಂದು ಬೆಳಗ್ಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಿಸಿದ್ದೇವೆ. ಆದರೆ ಅವರ ಚಲನವಲನದಿಂದ ಅನುಮಾನಗೊಂಡು ವಿಚಾರಿಸಿದಾಗ ಸೂಕ್ತ ಉತ್ತರ ನೀಡದೆ ತೆರಳಿದ್ದಾರೆ. ಪ್ರಧಾನ ಮಂತ್ರಿಗಳ ವೆಬ್‌ಸೈಟ್‌ ಪರಿಶೀಲಿಸಿದಾಗ ಇವರ ಬಗ್ಗೆ ಸಮರ್ಪಕವಾದ ಮಾಹಿತಿ ದೊರೆತಿಲ್ಲ. ಕೇಂದ್ರ ಸರಕಾರದ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಶ್ರೀ ಮಠಕ್ಕೆ ಆಗಮಿಸಿ ಮೋಸ ಮಾಡಿದ್ದಾರೆ ಎಂದು ಮಠದ ಮ್ಯಾನೇಜರ್‌ ನಂದನ್‌ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

RELATED ARTICLES
- Advertisment -
Google search engine

Most Popular