ಸಾಧಕರಿಗೆ ಯುಗಾದಿ ಐಸಿರಿ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮ, ಜೊತೆಗೆ ಮೂರು ಕೃತಿಗಳ ಲೋಕಾರ್ಪಣೆಯೊಂದಿಗೆ ಯುಗಾದಿ ಬಳಗದ ಜೇನುಗೂಡಿನಲ್ಲಿ ಕವಿ ಮನಗಳ/ ಸಾಹಿತ್ಯ ಪ್ರೇಮಿಗಳ ಚಿಲಿಪಿಲಿ ನಿನಾದ.
ಧರ್ಮಸ್ಥಳ: ಮುಖಪುಟದ ಹಲವಾರು ಸಾಹಿತ್ಯ ಬಳಗಗಳಲ್ಲಿ ಒಂದಾದ ಯುಗಾದಿ ಬಳಗದ ಸ್ನೇಹಕೂಟ ಕಾರ್ಯಕ್ರಮ ದಿನಾಂಕ 20-10-2024 ರ ಭಾನುವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಮುಂಬೈ, ಪುಣೆಯಿಂದ ಕವಿಗಳು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಬಳಗದ ಮೂವರು ವ್ಯವಸ್ಥಾಪಕಿಯರಾದ ಕಾಸರಗೋಡಿನ ಸೌಮ್ಯ ಗುರು ಕಾರ್ಲೆಯವರ ಹೇಮಾಕ್ಷರಿ, ಬೆಂಗಳೂರಿನ ಶ್ರೀಲತಾ ಭಾರ್ಗವ್ ರವರ ಸೇವಂತಿಗೆ ಹಾಗೂ ತುಮಕೂರಿನ ಮೀನಾ ನಾಗರಾಜ್ ರವರ ಭಾವದಿಂಚರ ಕೃತಿಗಳು ಲೋಕಾರ್ಪಣೆಗೊಂಡವು.
ಇದೇ ಸಂದರ್ಭದಲ್ಲಿ ಯುಗಾದಿ ಬಳಗದ ಬರಹಗಾರರು ಹಾಗೂ ಸಾಹಿತ್ಯದ ಸಾಧನೆ ಮಾಡಿದ ಸಾಧಕ/ಸಾಧಕಿಯರಿಗೆ ‘ಯುಗಾದಿ ಐಸಿರಿ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗಿನ ವೀಣಾ ಉಮೇಶ್ ರವರ ಪ್ರಾರ್ಥನೆ ಮೂಲಕ ಪ್ರಾರಂಭಗೊಂಡು, ಬೆಳ್ತಂಗಡಿ ತಾಲೂಕಿನ ವಿಜಯ್ ಕುಮಾರ್ ಜೈನ್ ರವರು ಜ್ಯೋತಿ ಪ್ರಜ್ವಲನೆ ಮಾಡಿದರು. ಬೆಂಗಳೂರಿನ ಸುಜಾತಾ ಭಟ್ ಸ್ವಾಗತಿಸಿದರು, ಯುಗಾದಿ ನವ ಪಲ್ಲವಕೆ ನಾಂದಿ ಬಳಗದ ಸಂಸ್ಥಾಪಕರಾದ ಹೊನ್ನಾವರದ ಶ್ರೀನಾಗ್ ಪಿ. ಎಸ್ ರವರು ಪ್ರಾಸ್ತಾವಿಕ ನುಡಿಗಳನ್ನು ಮಂಡಿಸಿದರು. ಬೆಳ್ತಂಗಡಿಯ ಆಶಾ ಅಡೂರ್, ಶ್ರೀಲತಾ ಭಾರ್ಗವ್ ಹಾಗೂ ಬೆಂಗಳೂರಿನ ದರ್ಶಿನಿ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ತುಮಕೂರಿನ ಮೀನಾ ನಾಗರಾಜ್ ವಂದಿಸಿದರು. ಪುಣೆಯ ಶ್ರೀ ಶರಣು ಕುಂಬಾರ್, ಶ್ರೀ ಪಿ. ಎಸ್ ಭಟ್, ಶಾಮಲ ಗೋಪಿನಾಥ್, ಸುಮತಿ ಪಿ ಮುಂತಾದವರು ಉಪಸ್ಥಿತರಿದ್ದರು. ನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಹಲವಾರು ಕವಿ/ಕವಯಿತ್ರಿಯರು ತಮ್ಮ ತಮ್ಮ ಸ್ವರಚಿತ ಕವನ ವಾಚನ ಮಾಡುವುದರ ಮೂಲಕ ಸಾಹಿತ್ಯ ಪ್ರೇಮಿಗಳಿಗೆ ಕಾವ್ಯದ ರಸದೌತಣವನ್ನು ನೀಡಿ ರಂಜಿಸಿದರು. ರಾಜ್ಯದ ಹಾಗೂ ಹೊರ ರಾಜ್ಯದ ವಿವಿಧ ಕಡೆಯಿಂದ ಯುಗಾದಿ ಬಳಗದ ಸದಸ್ಯರು ಆಗಮಿಸಿ ಯುಗಾದಿ ಸ್ನೇಹಪರ್ವ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
– ಪುಷ್ಪ ಪ್ರಸಾದ್ ಉಡುಪಿ