Saturday, April 26, 2025
Homeಮಂಗಳೂರುಉಳಾಯಿಬೆಟ್ಟು ಪಿಡಬ್ಲ್ಯೂಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ ಮನೆ ದರೋಡೆ ಪ್ರಕರಣ: 10 ಮಂದಿ ಬಂಧನ

ಉಳಾಯಿಬೆಟ್ಟು ಪಿಡಬ್ಲ್ಯೂಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ ಮನೆ ದರೋಡೆ ಪ್ರಕರಣ: 10 ಮಂದಿ ಬಂಧನ

ದರೋಡೆಕೋರರನ್ನು ಹಿಡಿದ ಪೊಲೀಸ್‌ ಕಾರ್ಯಾಚರಣೆ ಮೆಚ್ಚುಗೆಗೆ ಪಾತ್ರವಾದುದು
ದರೋಡೆಕೋರರ ಖತರ್ನಾಕ್‌ ಪ್ಲಾನ್‌ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ!
ಮಂಗಳೂರು: ಉಳಾಯಿಬೆಟ್ಟು ಪೆರ್ಮಂಕಿಯ ಉದ್ಯಮಿ, ಪಿಡಬ್ಲ್ಯೂಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ. ತೀವ್ರ ಪರಿಶೋಧನೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಸ್ಥಳೀಯರಾದ ನೀರುಮಾರ್ಗ ಒಂಟೆಮಾರು ಕಂಪಮನೆ ನಿವಾಸಿ ವಸಂತ ಯಾನೆ ವಸಂತ ಕುಮಾರ್‌ (42), ನೀರುಮಾರ್ಗ ಗ್ರಾ.ಪಂ. ಬಳಿಯ ನಿವಾಸಿ ರಮೇಶ ಪೂಜಾರಿ, ಬಂಟ್ವಾಳ ತಾಲೂಕು ಪೆರುಮಾಯಿ ಗ್ರಾಮದ ಮುಕುಡಾಪು ಹೌಸ್‌ ನಿವಾಸಿ ರೇಮಂಡ್‌ ಡಿಸೋಜ (47), ಕಾಸರಗೋಡು ಜಿಲ್ಲೆ ಉಪ್ಪಳ ಪೈವಳಿಕೆ ಕುರುಡುಪದವು ಕುರಿಯ ಹೌಸ್‌ನ ಬಾಲಕೃಷ್ಣ ಶೆಟ್ಟಿ ಯಾನೆ ಬಾಲಣ್ಣ (48) ಬಂಧಿತ ಆರೋಪಿಗಳು. ದರೋಡೆ ಸಂಚು ರೂಪಿಸಿದ ಕೇರಳದ ತ್ರಿಶೂರ್‌ ಜಿಲ್ಲೆಯ ಉರ್ಕನ್‌ ಗ್ರಾಮದ ಜಾಕೀರ್‌ ಯಾನೆ ಶಾಕೀರ್‌ ಹುಸೇನ್‌ (56). ತೋಮ್ಮನ್‌ ಕುಡುಪ್ಪಸೇರಿಯ ವಿನೋಜ್‌ ಪಿ.ಕೆ. ಯಾನೆ ವಿನ್ನುಣ ವಿನೋಜ್‌ ಪಲ್ಲಿಸ್ಸೆರಿ (38), ವಡಕ್ಕನ್‌ ಚೇರಿ ಮುಳಕ್ಕಲ್‌ ಹೌಸ್‌ ನಿವಾಸಿ ಸಜೀಶ್‌ ಎಂ.ಎಂ. ಯಾನೆ ಮಣಿ (32). ವರಂಡ್ರಪಿಲ್ಲಿ ಅಂಚೆ ಕುನತುಲ್ಲಿ ಹೌಸ್‌ ನಿವಾಸಿ ಸತೀಶ್‌ ಬಾಬು (44). ಕೊಡಕ್ಕರ ಪೇರಂಬ್ರ ಅಂಚೆ ಕಾಚಪ್ಪಳ್ಳಿ ಹೌಸ್‌ ನಿವಾಸಿ ಶಿಜೋ ದೇವಸ್ಸಿ (38) ಹಾಗೂ ತಿರುವನಂತಪುರಂ ಜಿಲ್ಲೆ ಅಯಾನಿಮೂಡು ಪೋತನ್‌ ಕೋಡುವಿನ ಜಾನ್‌ ಬಾಸ್ಕೊ ಯಾನೆ ಬಿಜು ಜಿ. (41) ಎಂಬ ಆರೋಪಿಗಳನ್ನೂ ಬಂಧಿಸಲಾಗಿದೆ.
ಬಂಧಿತರನ್ನು 14 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಹೇಳಿದ್ದಾರೆ. ಇನ್ನೂ ನಾಲ್ಕೈದು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಕೋಟ್ಯಾನ್‌ ಅವರ ಲಾರಿ ಚಾಲಕನೇ ಮೂಲ:
ಕೋಟ್ಯಾನ್‌ ಅವರ ಲಾರಿ ಚಾಲಕ ವಸಂತ ಕುಮಾರ್‌ ಪ್ರಕರಣದಲ್ಲಿ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ತಿಳಿದುಬಂತು. ಹೀಗಾಗಿ ಆತನನ್ನು ವಿಚಾರಣೆ ನಡೆಸಿದಾಗ ಪ್ರಕರಣದ ಸಂಪೂರ್ಣ ವಿವರ ಬೆಳಕಿಗೆ ಬಂತು. ಉದ್ಯಮಿಯ ವ್ಯವಹಾರ ಹಾಗೂ ಮನೆಯ ಮಾಹಿತಿಯನ್ನು ಆತ ಇನ್ನೊಬ್ಬ ಆರೋಪಿ ರಮೇಶ್‌ ಪೂಜಾರಿಗೆ ನೀಡಿದ್ದ. ರಮೇಶ್‌ ಪೂಜಾರಿ ಮತ್ತು ರೇಮಂಡ್‌ ಡಿಸೋಜ ಇನ್ನೊಬ್ಬ ಆರೋಪಿ ಬಾಲಕೃಷ್ಣ ಶೆಟ್ಟಿಗೆ ಮಾಹಿತಿ ನೀಡಿದ್ದಾರೆ. ಬಾಲಕೃಷ್ಣ ಶೆಟ್ಟಿ ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆ ಮಾಡಲು ಸಂಚು ರೂಪಿಸಿ ಉದ್ಯಮಿಯ ಮನೆಯ ಮಾಹಿತಿ ನೀಡಿ ಆರೋಪಿಗಳನ್ನು ಮಂಗಳೂರಿಗೆ ಕರೆಸಿಕೊಂಡು ದರೋಡೆ ಕೃತ್ಯ ನಡೆಸಲಾಗಿದೆ ಎಂದು ತನಿಖೆಯ ವೇಳೆ ವಸಂತ ಕುಮಾರ್‌ ಬಾಯಿಬಿಟ್ಟಿದ್ದಾನೆ.

ಬಂಧಿತ ವಸಂತ ಕುಮಾರ್‌ ಪಂಚಾಯತ್‌ ಸದಸ್ಯ!:
ಬಂಧಿತ ವಸಂತ ಕುಮಾರ್‌ ನೀರುಮಾರ್ಗ ಗ್ರಾಮ ಪಂಚಾಯತ್‌ ಸದಸ್ಯನಾಗಿದ್ದ. ಜೊತೆಗೆ ಪದ್ಮನಾಭ ಕೋಟ್ಯಾನ್‌ ಮನೆಯಲ್ಲಿ 4 ವರ್ಷಗಳಿಂದ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಘಟನೆಯ ದಿನವೂ ವಿಟ್ಲಕ್ಕೆ ಲಾರಿ ತೆಗೆದುಕೊಂಡು ಹೋಗಿ ಮನೆಯಲ್ಲಿ ತಂದಿಟ್ಟಿದ್ದ. ದರೋಡೆ ಬಳಿಕ ಪೊಲೀಸರು ಬಂದು ಪರಿಶೀಲಿಸುವಾಗ ಏನೂ ಗೊತ್ತಿಲ್ಲದವನಂತೆ ನಾಟಕ ಮಾಡಿದ್ದ ಎಂದು ತಿಳಿದುಬಂದಿದೆ.


ಬಂಧಿತರು ಕ್ರಿಮಿನಲ್‌ಗಳು: ಬಂಧಿತರು ಈಗಾಗಲೇ ಹಲವು ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರು. ಹಲವರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.


300 ಕೋಟಿ ರೂ. ಇದೆ ಎಂದು ದರೋಡೆ: ಕೋಟ್ಯಾನ್‌ ಮನೆಯಲ್ಲಿ 300 ಕೋಟಿ ರೂ. ಇದೆ ಎಂದು ದರೋಡೆಕೋರರ ತಂಡ ಭಾವಿಸಿತ್ತು. ವಸಂತ ಕುಮಾರ್‌ 100 ಕೋಟಿ ರೂ. ಇರುವುದಾಗಿ ಸ್ನೇಹಿತರಿಗೆ ತಿಳಿಸಿದ್ದ. ಆದರೆ ಅದು ಕೇರಳದ ದರೋಡೆಕೋರರಿಗೆ ಮಾಹಿತಿ ತಲುಪುವಾಗ 300 ಕೋಟಿ ರೂ. ಎಂದಾಗಿತ್ತು. ಹಣ ಕೊಂಡೊಯ್ಯಲೆಂದು 15-20 ಗೋಣಿಗಳನ್ನು ತಂದಿದ್ದರು ಮತ್ತು ಕಪಾಟು ಒಡೆಯಲು ಆಯುಧಗಳನ್ನೂ ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ಹಾದಿ ತಪ್ಪಿಸಲು ಸಂಚು: ದರೋಡೆಕೋರರು ಪ್ರಕರಣದ ಹಾದಿ ತಪ್ಪಿಸಲು ಆರೋಪಿಯಲ್ಲೊಬ್ಬ ಘಟನೆಯ ವೇಳೆ ಹಿಂದಿ ಮಾತನಾಡುತ್ತಿದ್ದ. ಅಲ್ಲದೆ ಕೋಟ್ಯಾನ್‌ ಅವರ ಕಾರನ್ನು ಕೊಂಚ ದೂರದ ವರೆಗೆ ಕೊಂಡೊಯ್ದು ಬಂಟ್ವಾಳದ ಕಡೆಗೆ ತಿರುಗಿಸಿ, ತಮ್ಮ ಇನೋವ ಕಾರಿನಲ್ಲಿ ತಲಪಾಡಿ ಮೂಲಕ ಕೇರಳ ತಲುಪಿದ್ದರು.

ಹ್ಯೂಮನ್‌ ಇಂಟಲಿಜೆನ್ಸಿ ತನಿಖಾ ವಿಧಾನ: ಜೂ. 21ರಂದು ಕೋಟ್ಯಾನ್‌ ಅವರ ಮನೆಗೆ 10-12 ಮಂದಿ ನುಗ್ಗಿ ಚೂರಿ ತೋರಿಸಿ, ಕೋಟ್ಯಾನ್‌ಗೆ ಚೂರಿಯಿಂದ ಹಲ್ಲೆ ನಡೆಸಿ ಅವರ ಪತ್ನಿ ಹಾಗೂ ಮಗನನ್ನು ಕಟ್ಟಿ ಹಾಕಿ 1.5 ಲಕ್ಷ ನಗದು ಸಹಿತ ಚಿನ್ನಾಭರಣ ಸೇರಿ 9 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಯಾವುದೇ ಸಾಕ್ಷ್ಯವಿರಲಿಲ್ಲ. ಆದರೆ ಹ್ಯೂಮನ್‌ ಇಂಟಲಿಜೆನ್ಸಿ ಸ್ವರೂಪದ ತನಿಖೆಯ ಮಾದರಿಯಲ್ಲಿ ಕೋಟ್ಯಾನ್‌ ಅವರ ಆಪ್ತರು, ಕೆಲಸಗಾರರ ವಿಚಾರಣೆ ನಡೆಸಿದಾಗ ವಸಂತ ಕುಮಾರ್‌ ಪ್ರಕರಣದ ಮೂಲ ಎಂಬುದು ಪೊಲೀಸರಿಗೆ ಗೊತ್ತಾಗಿತ್ತು.

RELATED ARTICLES
- Advertisment -
Google search engine

Most Popular