Sunday, July 21, 2024
Homeಅಪರಾಧಹಜ್‌ ಉಮ್ರಾ ಯಾತ್ರೆಯ ವೇಳೆ ಯಾತ್ರಿಕರ ಖರ್ಚಿಗಿಟ್ಟಿದ್ದ ಹಣ ಕಳವು!

ಹಜ್‌ ಉಮ್ರಾ ಯಾತ್ರೆಯ ವೇಳೆ ಯಾತ್ರಿಕರ ಖರ್ಚಿಗಿಟ್ಟಿದ್ದ ಹಣ ಕಳವು!

ವಿಮಾನಗಳಲ್ಲಿನ ಕಳ್ಳತನದ ಜಾಲ ಭೇದಿಸುವಂತೆ ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್‌ ಶೆಟ್ಟಿ ಜಪ್ಪು ಆಗ್ರಹ
ಮಂಗಳೂರು: ಹಜ್‌ ಮತ್ತು ಉಮ್ರಾ ಯಾತ್ರೆಗೆ ಹೋಗುವ ಪ್ರಯಾಣಿಕರ ಜೊತೆ ಗೈಡ್‌ ಆಗಿ ಹೋಗಿದ್ದ ವ್ಯಕ್ತಿಯೊಬ್ಬರು ಯಾತ್ರಿಕರ ವೆಚ್ಚಕ್ಕೆಂದು ತಮ್ಮ ಬಳಿ ಕೊಂಡೊಯ್ದಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ ಹಣ ಕಳವಾಗಿದ್ದು, ಈ ಕಳ್ಳತನದ ಜಾಲವನ್ನು ಭೇದಿಸಿ ನ್ಯಾಯ ಕೊಡಬೇಕೆಂದು ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜೆಪ್ಪು ಒತ್ತಾಯಿಸಿದ್ದಾರೆ. ಈ ಬಗ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸುಮಾರು 25 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ನಿವಾಸಿ ಬದ್ರುದ್ದೀನ್‌ ಕದಂಬಾರ್‌ ನಗರದ ಅತ್ತಾವರದ ಅಜ್ಯಾದ್ ಟ್ರಾವೆಲ್ಸ್‌ನಲ್ಲಿ ಹಜ್‌ ಮತ್ತು ಉಮ್ರಾ ಯಾತ್ರೆಗೆ ತೆರಳುವವರಿಗೆ ಗೈಡ್‌ ಆಗಿ ಕೆಲಸ ಮಾಡುತ್ತಿದ್ದರು. ಈ ರೀತಿ ಮೂರು ಬಾರಿ ಅಜ್ಯಾದ್ ಟ್ರಾವೆಲ್ಸ್‌ನ ಇಕ್ಬಾಲ್‌ ಜೊತೆ ಸೇವೆ ಸಲ್ಲಿಸಿದ ಅನುಭವ ಬದ್ರುದ್ದೀನ್‌ ಅವರಿಗಿದೆ. ಆ ಪ್ರಕಾರ, 30-04-2024ರಂದು ಅಜ್ಯಾದ್ ಟ್ರಾವೆಲ್ಸ್‌ ಮಾಲಕರಾದ ಇಕ್ಬಾಲ್‌ರವರು ಒಟ್ಟು 34 ಪ್ರಯಾಣಿಕರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾನದಿಂದ ಮುಂಬೈ ಮಾರ್ಗವಾಗಿ ಸೌದಿ ಅರೇಬಿಯಾದ ಜೆದ್ದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುವ ಬಗ್ಗೆ ಬದ್ರುದ್ದೀನ್‌ ಜೊತೆ ಮಾತುಕತೆ ನಡೆಸಿದ್ದರು ಎಂದು ಯೋಗೀಶ್‌ ಶೆಟ್ಟಿ ಜಪ್ಪುರವರು ತಿಳಿಸಿದರು.
ಒಟ್ಟು 34 ಜನರು ದಿನಾಂಕ 30-04 2024 ರಂದು ಇಂಡಿಗೊ ವಿಮಾ ಸಂಖ್ಯೆ 6E6523 ರಲ್ಲಿ ಸಂಜೆ 5.30 ಗಂಟೆಗೆ ಮಂಗಳೂರಿನಿಂದ ಮುಂಬೈಗೆ ಹೊರಟು ಸಂಜೆ 6.46 ಕ್ಕೆ ಮುಂಬೈ ತಲುಪಿ, ತದನಂತರ ಮುಂಬೈನಿಂದ ಇಂಡಿಗೊ ವಿಮಾನ (ಸಂಖ್ಯೆ 6E 91 (A321) ದಲ್ಲಿ ಹೊರಟು ದಿನಾಂಕ 01-೦5-2024 ರಂದು ರಾತ್ರಿ ಸುಮಾರು 10.25 ಕ್ಕೆ ಹೊರಟು ರಾತ್ರಿ 1.30 ಗಂಟೆಗೆ ಜೆದ್ದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿರುತ್ತಾರೆ. ಬದ್ರುದ್ದೀನ್ ರವರು ತನ್ನಲಿದ್ದ ಟ್ರಾಲಿ ಬ್ಯಾಗನ್ನು ವಿಮಾನ ನಿಲ್ದಾಣದಿಂದ ಹೊರಗಡೆ ತೆಗೆದುಕೊಂಡು ಹೋಗಿ ತಮ್ಮ ಬಸ್ಸಿನ ಬಳಿ ಹೋಗಿ ನೋಡಿದಾಗ ಯಾರೋ ಕಳ್ಳರು ಅವರ ಟ್ರಾಲಿ ಬ್ಯಾಗಿನ ಚಿಕ್ಕ ಬೀಗವನ್ನು ಮುರಿದು ಅದರಲ್ಲಿದ್ದ 26432 ಸೌದಿ ರಿಯಲ್ ಹಣ ಕಳವು ಮಾಡಿರುವುದು ಕಂಡು ಬಂತು. ಬಸ್ಸಿನವರು ಬೇಗ ಹೊರಡುವಂತೆ ಹೇಳಿದ್ದರಿಂದ 34 ಜನ ಪ್ರಯಾಣಿಕರು ಬಸ್ಸಿನಲ್ಲಿ ಮದೀನಾಗೆ ಹೋಗಿರುತ್ತಾರೆ. ಈ ಬಗ್ಗೆ ಯಾತ್ರೆಯಿಂದ ಹಿಂದಿರುಗಿದ ಬಳಿಕ ಬದ್ರದ್ದೀನ್‌ ಅವರು ಬಜ್ಪೆ ಠಾಣೆಯಲ್ಲಿ ದೂರು ನೀಡುತ್ತಾರೆ. ಅದರಂತೆ 30-05-2024ರಂದು ಎಫ್‌ಐಾರ್‌ ದಾಖಲಾಗಿರುತ್ತದೆ. ಆದರೆ ಈ ಬಗ್ಗೆ ಈವರೆಗೂ ಬದ್ರುದ್ದೀನ್‌ ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಅವರು ತುಳುನಾಡ ರಕ್ಷಣಾ ವೇದಿಕೆಯನ್ನು ಸಂಪರ್ಕಿಸಿ ಕಾನೂನು ಹೋರಾಟಕ್ಕೆ ಸಹಕರಿಸುವಂತೆ ಕೋರಿದ್ದಾರೆ ಎಂದು ಯೋಗೀಶ್‌ ಶೆಟ್ಟಿ ಜಪ್ಪು ಹೇಳಿದರು.
ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಪೊಲೀಸ್ ಆಯುಕ್ತರು, ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ವಿಮಾನಯಾನ ಸಚಿವರಿಗೆ ನಾವು ಮನವಿಯನ್ನು ಸಲ್ಲಿಸಿದ್ದು, ವಿಮಾನ ನಿಲ್ದಾಣದ ಕಳ್ಳತನದ ಜಾಲವನ್ನು ಭೇದಿಸುವಂತೆ ಒತ್ತಾಯಿಸಿರುತ್ತೇವೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಎದುರುಗಡೆ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಹಾಗೂ ಟೂರ್ಸ್‌, ಟ್ರಾವೆಲ್ಸ್ ರವರ ಸಹಕಾರದೊಂದಿಗೆ ಪ್ರತಿಭಟನಾ ಸಭೆ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು. ಹಣ ಕಳೆದುಕೊಂಡಿರುವ ಬದ್ರುದ್ದೀನ್ ರವರು ತನ್ನ ಸೌದಿ ಅರೇಬಿಯಾದಲ್ಲಿ ಅನುಭವಿಸಿದ ತನ್ನ ಸಂಕಷ್ಟಗಳನ್ನು ಹಂಚಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಟೂರ್ಸ್ ಅಂಡ್ ಟ್ರಾವೆಲ್ಸ್ ಏಜೆಂಟ್ ಇಕ್ಬಾಲ್, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಳ್ಳಾಲ ತಾಲೂಕು ಗೌರವಾಧ್ಯಕ್ಷ ಡಾಕ್ಟರ್ ಶೇಕ್ ಭಾವ ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಸುಕೇಶ್ ಉಚ್ಚಿಲ್ ಜಿಕೆ, ಜಾಕಿರ್ ಇಕ್ಲಾಸ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular