ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ಸು ನಿಲ್ದಾಣ ಬಳಿಯ ನೇತ್ರಾವತಿ ನದಿ ಸೇತುವೆ ಬದಿಯಲ್ಲಿ ಮಂಗಳವಾರ ಸಂಜೆ ದೊಡ್ಡ ಗಾತ್ರದ ಮೊಸಳೆಯೊಂದು ಕಂಡುಬಂದಿದೆ. ನೇತ್ರಾವತಿ ಸೇತುವೆಯ ಇನ್ನೊಂದು ದಡ ಇಳಂತಿಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ನದಿಯ ಬದಿಯ ಮರಳ ದಿಬ್ಬದಲ್ಲಿ ಮೊಸಳೆ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾಮ ಪಂಚಾಯತಿ ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಫಯಾಜ್ ಯು.ಟಿ. ಗಮನಿಸಿದ್ದು, ಅದರ ಫೋಟೊ ಕ್ಲಿಕ್ಕಿಸಿದ್ದಾರೆ.
ಮೊಸಳೆ ಕಂಡುಬಂದ ಸುಮಾರು 500 ಮೀಟರ್ ದೂರದಲ್ಲಿ ನೇತ್ರಾವತಿ-ಕುಮಾರಧಾರ ನದಿಗಳು ಸಂಗಮವಾಗುತ್ತಿದ್ದು, ಅಲ್ಲೇ ಇರುವ ಸಹಸ್ರಲಿಂಗೇಶ್ವರ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿ ಪಿಂಡ ಪ್ರದಾನ ಕಾರ್ಯ, ತೀರ್ಥ ಸ್ನಾನಗಳು ನಿರಂತರವಾಗಿ ನಡೆಯುತ್ತಿವೆ. ಇದು ಈಗ ದೇವಸ್ಥಾನದ ಭಕ್ತರಲ್ಲಿ ಆತಂಕವನ್ನುಂಟು ಮಾಡಿದೆ. ಅಲ್ಲದ, ಈ ಭಾಗದಲ್ಲಿ ನದಿಗೆ ಇಳಿದು ಮೀನು ಹಿಡಿಯುವುದು, ಗಾಳ ಹಾಕುವುದು ಸಾಮಾನ್ಯವಾಗಿದ್ದು, ಮೊಸಳೆ ಕಂಡು ಬಂದಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.