ಹಿಂಸೆಯಿಂದ ಕರುಣೆಗೆ ತಿರುಗಿದ ವಾಲ್ಮೀಕಿ: ರವೀಂದ್ರ ರೈ ಕಲ್ಲಿಮಾರು
ಮುಡಿಪು: ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ, ಜನರನ್ನು ದರೋಡೆ ಮಾಡುತ್ತಿದ್ದ ಬೇಡ ಮನ:ಪರಿವರ್ತನೆಗೊಂಡು ವಾಲ್ಮೀಕಿಯಾಗಿ ಹಿಂಸೆಯಿಂದ ಕರುಣೆಯ ಕಡೆಗೆ ಹೊರಳಿದ. ಕ್ರೌಂಚಪಕ್ಷಿಗಳ ಮೇಲಾದ ಬಾಣಾಘಾತ ವಾಲ್ಮೀಕಿಯಲ್ಲಿ ಉಂಟು ಮಾಡಿದ ಸಂವೇದನೆ ರಾಮಾಯಣದ ಸೃಷ್ಟಿಗೆ ಕಾರಣವಾಯಿತು ಎಂದು ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ರವೀಂದ್ರ ರೈ ಕಲ್ಲಿಮಾರ್ ಹೇಳಿದರು.
ಅವರು ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನಡೆಸಿದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಾಲ್ಮೀಕಿ ರಾಮಾಯಣದ ಮೂಲಕ ನೀಡಿದ ನೂರು ಸಂದೇಶಗಳು ಇಂದಿಗೂ ಪ್ರಸ್ತುತ. ತಾಯಿನಾಡು, ಸತ್ಯ, ಏಕಾಗ್ರತೆ ಮೊದಲಾದ ಮೌಲ್ಯಗಳು ನಮಗೆ ಆದರ್ಶವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಸೋಮಣ್ಣ ಮಾತನಾಡಿ ವಾಲ್ಮೀಕಿ ರಾಮಾಯಣದ ಪ್ರೇರಣೆಯಿಂದ ಅನೇಕ ರಾಮಾಯಣಗಳು ಹುಟ್ಟಿವೆ. ಕನ್ನಡದಲ್ಲಿ ಜೈನ ರಾಮಾಯಣಗಳಿಂದ ತೊಡಗಿ ಜಾನಪದ ರಾಮಾಯಣ, ಕುವೆಂಪು ಅವರ ರಾಮಾಯಣ ದರ್ಶನಂವರೆಗೆ ಅದರ ಹರವು ವಿಸ್ತಾರವಾದುದು ಎಂದರು.
ಕನ್ನಡ ಪ್ರಾಧ್ಯಾಪಕರಾದ ಪ್ರೊ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಚಂದ್ರಶೇಖರ ಎಂ.ಬಿ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ವಿನಾಯಕ ಪಾಟೀಲ ವಂದಿಸಿದರು.