ಬೆಳಗಾವಿ: ದೇವೇಗೌಡರ ಕುಟುಂಬದ ಸದಸ್ಯರು ಹಾಸನವಷ್ಟೇ ಅಲ್ಲ, ಕರ್ನಾಟಕದ ಹೆಸರು ಹಾಳುಗೈದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಕಿಡಿಗಾರಿದ್ದಾರೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.
ದೇವೇಗೌಡರ ಮಗ, ಮೊಮ್ಮಗನಿಂದ ಒಂದಲ್ಲ, ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯವಾಗಿದೆ. ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ. ಕರ್ನಾಟಕದ ಹೆಸರು ಕೆಡಿಸಿದ್ದಾರೆ. ರಾಜಕೀಯ ಕೆಡಿಸಿದ್ದಾರೆ. ದೇಶದ ಎದುರು ಕರ್ನಾಟಕ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಾರಿಶಕ್ತಿ, ಬೇಟಿ ಪಡಾವೋ, ಬೇಟಿ ಬಚಾವೋ ಅಂತಾರೆ. ಭಾರತ ಸರ್ಕಾರದ ಬಳಿಯೇ ನ್ಯಾಷನಲ್ ಕ್ರೈಂ ರೆಕಾರ್ಡ್ ಮಾಹಿತಿ ಇದೆ. ಯುಪಿಎ ಸಮಯದಲ್ಲಿ ಮೂರು ಲಕ್ಷ ಮಹಿಳೆಯರ ಮೇಲೆ ದೌರ್ಜನ್ಯ ಆಗ್ತಿತ್ತು. ಈಗ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ 22 ಲಕ್ಷ ದಾಟಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರಜ್ವಲ್ ಲೈಂಗಿಕ ಹಗರಣದ ಎಲ್ಲಾ ಸೂತ್ರದಾರರು ಪ್ರಧಾನಿ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಮಲಗಿದ್ದಾರೆಯೇ? ಇಂಥ ಕೃತ್ಯ ಎಸಗಿ ಹಣ ದೋಚಿಕೊಂಡು ದೇಶದಿಂದ ಪರಾರಿ ಆಗ್ತಿದ್ದಾರೆ. ಕೇಂದ್ರದಲ್ಲಿ ಇಂಥ ಸರ್ಕಾರ ಇದ್ದರೆ ಏನು ಪ್ರಯೋಜನ ಎಂದು ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.