ಉಜಿರೆ: ಜೈನಧರ್ಮದ ತಿರುಳಾದ ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರಂತ್ರಿಯದ ಪ್ರತೀಕವಾದ ರಥಯಾತ್ರಾ ಮಹೋತ್ಸವದಲ್ಲಿ ಭಾಗವಹಿಸುವುದರಿಂದ ದೇವರ ಅನುಗ್ರಹ ಪ್ರಾಪ್ತಿಯೊಂದಿಗೆ ಧರ್ಮಪ್ರಭಾವನೆಯಾಗುತ್ತದೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ವೇಣೂರಿನಲ್ಲಿ ಬಾಹುಬಲಿಬೆಟ್ಟದಲ್ಲಿ ಶುಕ್ರವಾರ ರಾತ್ರಿ ರಥಯಾತ್ರಾ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ಎಲ್ಲರೂ ರಥಯಾತ್ರೆಯಂತಹ ವಿಶೇಷ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯಾತ್ರಿನಿವಾಸದಲ್ಲಿ ಸ್ವಾಧ್ಯಾಯಕೇಂದ್ರದಲ್ಲಿ ನೂತನ ಶ್ರುತಭಂಡಾರವನ್ನು ಉದ್ಘಾಟಿಸಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸ್ವಾಧ್ಯಾಯದಿಂದ ಆತ್ಮಕಲ್ಯಾಣದೊಂದಿಗೆ ಪುಣ್ಯಸಂಚಯವಾಗುತ್ತದೆ ಎಂದು ಹೇಳಿದರು. ವೇಣೂರು ತೀರ್ಥಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದರು.
ಹಿರಿಯ ಶ್ರಾವಕರಾದ ಗುಣವತಿ ಪಿ.ಎ. ಆಳ್ವ, ಜಗತ್ಪಾಲ ಮುದ್ಯ, ಕತ್ತೋಡಿ, ಗುಣವತಿ ಅಮ್ಮ ಬರಮೇಲು ಅವರನ್ನು ಗೌರವಿಸಲಾಯಿತು. ಉನ್ನತ ಸಾಧನೆ ಮಾಡಿದ ಪಾರ್ಶ್ವನಾಥ ಜೈನ್ ನೇರೆಂಕಿ ಅವರನ್ನು ಸನ್ಮಾನಿಸಲಾಯಿತು. ಕೋಶಾಧಿಕಾರಿ ಪಿ. ಜಯರಾಜ ಕಂಬಳಿ ಉಪಸ್ಥಿತರಿದ್ದರು.
ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ ಕುಮಾರ್ ಇಂದ್ರ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಮೂಡುಕೋಡಿ ಗುತ್ತು ಮಹಾವೀರ ಜೈನ್ ಕೊನೆಯಲ್ಲಿ ಧನ್ಯವಾದವಿತ್ತರು.
ಭಗವಾನ್ ಬಾಹುಬಲಿ ಸ್ವಾಮಿಗೆ 24 ಕಲಶಗಳಿಂದ ಪಾದಾಭಿಷೇಕದ ಬಳಿಕ ರಥಯಾತ್ರಾ ಮಹೋತ್ಸವ ನಡೆಯಿತು.