Saturday, June 14, 2025
Homeಉಡುಪಿವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಡಾ/ ಧನಂಜಯ ಸರ್ಜಿ ಮತ್ತು ಎಸ್.ಎಲ್. ಭೋಜೇಗೌಡ ಗೆಲುವಿಗೆ ಬದ್ಧತೆಯಿಂದ...

ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಡಾ/ ಧನಂಜಯ ಸರ್ಜಿ ಮತ್ತು ಎಸ್.ಎಲ್. ಭೋಜೇಗೌಡ ಗೆಲುವಿಗೆ ಬದ್ಧತೆಯಿಂದ ಶ್ರಮಿಸಲು ಕೋಟ ಶ್ರೀನಿವಾಸ ಪೂಜಾರಿ ಕರೆ

ಜೂನ್ 3ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ! ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರ ಗೆಲುವಿಗೆ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣೆ ಮತ್ತು ವಿಧಾನಪರಿಷತ್ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚೆಗೆ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಂಘಟಿತರಾಗಿ ತೊಡಗಿಸಿಕೊಂಡ ಪಕ್ಷದ ಕಾರ್ಯಕರ್ತರ ಪರಿಶ್ರಮ ಅಭಿನಂದನನೀಯ. ಚುನಾವಣೆಯಲ್ಲಿ ದೊಡ್ಡ ಅಂತರದ ಗೆಲುವಿನ ನಿರೀಕ್ಷೆ ಇದೆ. ಕ್ಷೇತ್ರದ ಅಭಿವೃದ್ಧಿಗಾಗಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಎಲ್ಲರ ಪ್ರೋತ್ಸಾಹ, ಬೆಂಬಲ ಸದಾ ಇರಲಿ ಎಂದರು.

ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಶಿವಮೊಗ್ಗ ಭಾಗದ ಅಭ್ಯರ್ಥಿಗಳೇ ಬಿಜೆಪಿ ಅಭ್ಯರ್ಥಿಗಳಾಗಿರುವುದು ಇತಿಹಾಸ. ಡಿ.ಹೆಚ್. ಶಂಕರಮೂರ್ತಿಯವರು ಸುದೀರ್ಘ 30 ವರ್ಷಗಳ ಅವಧಿಗೆ ಇದೇ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಬಾರಿ ಡಾ! ಧನಂಜಯ ಸರ್ಜಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣಕ್ಕೆ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಎನ್.ಡಿ.ಎ ಅಭ್ಯರ್ಥಿಯಾಗಿ ಎಸ್.ಎಲ್ ಭೋಜೇಗೌಡ ಅವರು ಸ್ಪರ್ಧಿಸಲು ಬಿಟ್ಟುಕೊಡಲಾಗಿದೆ. ಪಕ್ಷದ ಪರಂಪರೆಯಂತೆ ಅಭ್ಯರ್ಥಿ ಘೋಷಣೆಯಾದ ಬಳಿಕ ಯಾವುದೇ ಗೊಂದಲ ಉಳಿದಿಲ್ಲ. ಜಿಲ್ಲೆಯ ಎಲ್ಲಾ ಶಾಸಕರು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಒಟ್ಟಾಗಿ ಒಂದಾಗಿ ವಿಧಾನಪರಿಷತ್ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬದ್ಧತೆಯಿಂದ ಶ್ರಮಿಸಬೇಕು ಎಂದು ಕೋಟ ವಿನಂತಿಸಿದರು.

ಲೋಕಸಭಾ ಚುನಾವಣೆಯ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ:.ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಬದ್ಧತೆಯಿಂದ ಶ್ರಮಿಸಿರುವ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪಕ್ಷದ ನೇತೃತ್ವದಲ್ಲಿ ನಡೆದ ವಿವಿಧ ಮೋರ್ಚಾಗಳ ಸಮಾವೇಶಗಳು, ಬೈಕ್ ರ್ಯಾಲಿ, ರೋಡ್ ಶೋಗಳು ಮತ್ತು ಮನೆ ಮನೆ ಪ್ರಚಾರ ಪಕ್ಷದ ಗೆಲುವಿಗೆ ಪೂರಕ ವಾತಾವರಣ ನಿರ್ಮಿಸಿವೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಕನಿಷ್ಠ ಒಂದೂವರೆ ಲಕ್ಷಕ್ಕೂ ಮಿಕ್ಕಿದ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ಪಕ್ಷ ವಿರೋಧಿ ಚಟುವಟಿಕೆ ಸಹಿಸಲಾಗದು, ನಿರ್ದಾಕ್ಷಿಣ್ಯ ಕ್ರಮ: ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಘೋಷಣೆಯಾಗಿದೆ. ಈಗಾಗಲೇ ಚುನಾವಣಾ ಕೆಲಸ ಕಾರ್ಯಗಳು ವೇಗ ಪಡೆದಿವೆ. ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಅಂತಹ ಸನ್ನಿವೇಶದಲ್ಲಿ ಪಕ್ಷದ ಚೌಕಟ್ಟಿನೊಳಗೆ ಸೂಕ್ತ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು. ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ! ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಕರೆ ನೀಡಿದರು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಅತ್ಯಂತ ಹುಮ್ಮಸ್ಸಿನಿಂದ ತೊಡಗಿಸಿಕೊಂಡಿದ್ದು ಪಕ್ಷದ ಅಭ್ಯರ್ಥಿ ಕೋಟರವರು ಗರಿಷ್ಠ ಅಂತರಗಳ ಮತದಿಂದ ಗೆಲ್ಲುವ ನಿರೀಕ್ಷೆ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಣವನ್ನು ಪಡೆದು ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿ, ಪ್ರಸಕ್ತ ಶಿವಮೊಗ್ಗ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾಗಿರುವ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ! ಧನಂಜಯ ಸರ್ಜಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ಈ ವಿಧಾನ ಪರಿಷತ್ ಚುನಾವಣೆ ಮುoಬರಲಿರುವ ಎಲ್ಲಾ ಚುನಾವಣೆಗಳಿಗೆ ಅಡಿಪಾಯವಿದ್ದಂತೆ. ಚುನಾವಣೆ ಎಂದರೆ ಯುದ್ಧ ಎದುರಿಸಿದಂತೆ. ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಸೈದ್ದಾಂತಿಕ ಚುನಾವಣೆಯನ್ನು ಯಾವುದೇ ಹಿನ್ನಡೆಯಾಗದ ರೀತಿಯಲ್ಲಿ ನಿಭಾಯಿಸುವುದು ನಮೆಲ್ಲರ ಕರ್ತವ್ಯವಾಗಿದೆ. ಅಭ್ಯರ್ಥಿಯ ಘೋಷಣೆಯಾದ ಬಳಿಕ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಯಾವುದೇ ಗೊಂದಲವಿಲ್ಲದೆ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿರ್ವಹಿಸಿ ಪಕ್ಷಕ್ಕೆ ಮುಜುಗರವಾಗದ ರೀತಿಯಲ್ಲಿ ನಡೆದುಕೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಬದ್ಧತೆಯಿಂದ ಕೈಜೋಡಿಸಬೇಕು ಎಂದರು.

ಮಾಜಿ ಸಚಿವ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಮಾತನಾಡಿ ಲೋಕಸಭಾ ಚುನಾವಣೆಗೆ ಪಕ್ಷ ಒಳ್ಳೆಯ ಅಭ್ಯರ್ಥಿಯನ್ನು ನೀಡಿದ್ದು ಪಕ್ಷದ ಸಮಸ್ತ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದಿದ್ದಾರೆ. ಸರಳ ಸಜ್ಜನಿಕೆಯ ಅನುಭವಿ ರಾಜಕಾರಣಿ ಕೋಟರವರ ಗೆಲುವು ನಿಶ್ಚಿತ. ಅಪಾರ ಶ್ರದ್ಧೆ ಮತ್ತು ಕಾರ್ಯ ತತ್ಪರತೆಯಿಂದ ಅವರು ಭವಿಷ್ಯದಲ್ಲಿ ಅತ್ಯುನ್ನತ ಸ್ಥಾನವನ್ನು ಅಲಂಕರಿಸಲಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ತತ್ವ ಸಿದ್ದಾಂತವನ್ನು ಮೆಚ್ಚಿ ನಾನು ಬಿಜೆಪಿಗೆ ಸೇರ್ಪಡೆಗೊಂಡವನು. ಪಕ್ಷದಲ್ಲಿ ಅಂತಹ ಉದಾತ್ತ ತತ್ವಕ್ಕೆ ಎಂದೂ ಘಾಸಿಯಾಗದು ಎಂಬುದು ನನ್ನ ನಂಬಿಕೆ. ವಿಧಾನ ಪರಿಷತ್ ಚುನಾವಣೆಯ ಎರಡೂ ಅಭ್ಯರ್ಥಿಗಳ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸೋಣ ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ. ಒಂದು ಕಾಲದಲ್ಲಿ ಕೇವಲ 2 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಇಂದು ಸಂಘಟನಾ ಸಾಮರ್ಥ್ಯದಿಂದ ದೇಶದಾದ್ಯಂತ 300ಕ್ಕೂ ಹೆಚ್ಚು ಸ್ಥಾನಗಳನ್ನು ಜಯಿಸಿದೆ. ಪಕ್ಷದ ತೀರ್ಮಾನವೇ ಅಂತಿಮವಾಗಿದ್ದು ನಿಷ್ಠಾವಂತ ಕಾರ್ಯಕರ್ತರು ಅದನ್ನು ಗೌರವಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕಾಗಿದೆ. ಅದೆಷ್ಟೋ ಮಂದಿ ಸಮರ್ಥ ಕಾರ್ಯಕರ್ತರಿಗೆ ಇಂದು ಯಾವುದೇ ಸೂಕ್ತ ಅವಕಾಶಗಳು ಸಿಗದೇ ಇರಬಹುದು. ತಾಳ್ಮೆ ಮತ್ತು ಸಮಾಧಾನದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಪಕ್ಷದ ಪರ ಧನಾತ್ಮಕ ಚಿಂತನೆಯೊಂದಿಗೆ ಕಾರ್ಯಪ್ರವೃತ್ತರಾದಾಗ ಗೆಲುವಿನ ದಾರಿ ಸುಗಮವಾಗುತ್ತದೆ. ಈ ನಿಟ್ಟಿನಲ್ಲಿ ಜೂನ್ 3 ಮತ್ತು 4 ಬಿಜೆಪಿ ಪಾಲಿಗೆ ಅತ್ಯಂತ ಮಹತ್ವಪೂರ್ಣ ದಿನಗಳಾಗಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಸಂಘಟಿತರಾಗಿ ಬದ್ಧತೆಯಿಂದ ತೊಡಗಿಸಿಕೊಳ್ಳೋಣ ಎಂದರು.

ಲೋಕಸಭಾ ಚುನಾವಣೆಯ ಅವಲೋಕನ ಹಾಗೂ ವಿಧಾನ ಪರಿಷತ್ ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ಮಂಡಲಗಳ ಅಧ್ಯಕ್ಷರು ವರದಿಯನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಮತ್ತು ಮಂಡಲಗಳ ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular