ಬೆಂಗಳೂರು: ಚಂದ್ರಯಾನ 3 ಉಡ್ಡಯನದ ಭಾಗವಾಗಿ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದು ಅಲ್ಲಿ 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್‌ಗಳನ್ನು ಮತ್ತೆ ಎಚ್ಚರಿಸುವ ಕಾರ್ಯವನ್ನು ಇಂದು ಇಸ್ರೋ ಕೈಗೊಳ್ಳಲಿದೆ. ಒಂದು ವೇಳೆ ಇದರಲ್ಲಿ ಯಶಸ್ವಿಯಾದರೆ ಮತ್ತೆ 14 ದಿನಗಳ ಕಾಲ ಇವು ಕಾರ್ಯ ನಿರ್ವಹಿಸಲಿವೆ.
ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಿದ್ದು, ಇಂದು ಅಲ್ಲಿ ಸೂರ್ಯೋದಯವಾಗಲಿದೆ. ಇಂದು ಲ್ಯಾಂಡರ್ ಮತ್ತು ರೋವರ್‌ಗಳು ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದರೆ ಇದು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಜ್ಜೆಯಾಗಲಿದೆ. ಅಲ್ಲದೇ ಚಂದ್ರನ ಮೇಲೆ ಮತ್ತಷ್ಟು ಸಂಶೋಧನೆಗಳನ್ನು ಕೈಗೊಳ್ಳಲು ಇದು ನೆರವು ನೀಡಲಿದೆ. ಚಂದ್ರನ ಮೇಲೆ 1 ಹಗಲಿನಲ್ಲಿ ಕೆಲಸ ಮಾಡಲು ಲ್ಯಾಂಡರ್ ಮತ್ತು ರೋವರ್‌ಗಳನ್ನು ಕಳುಹಿಸಲಾಗಿತ್ತು. ಆದರೆ ಇವುಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಕಾರಣ 2 ದಿನ ಮೊದಲೇ ಇವುಗಳನ್ನು ಸ್ಲೀಪ್ ಮೋಡ್‌ಗೆ ಹಾಕಲಾಗಿತ್ತು.