Thursday, July 25, 2024
Homeರಾಜಕೀಯನೈತಿಕತೆ ಮರೆತ ಅಧಿಕಾರಿಗಳಿಂದ ಚುನಾವಣಾ ನೀತಿಸಂಹಿತೆ ಉಲ್ಲಂಘನೆ

ನೈತಿಕತೆ ಮರೆತ ಅಧಿಕಾರಿಗಳಿಂದ ಚುನಾವಣಾ ನೀತಿಸಂಹಿತೆ ಉಲ್ಲಂಘನೆ

ಬೆಳ್ತಂಗಡಿ: ಇಲ್ಲಿ ಪರಿಣಾಮ ದುಷ್ಪರಿಣಾಮದ ಪ್ರಶ್ನೆ ಅಲ್ಲ; ಬದಲಾಗಿ ನೈತಿಕತೆಯ ಪ್ರಶ್ನೆ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವಾಗಲೇ ನೌಕರರೊಬ್ಬರ ನಿವೃತ್ತಿ ನೆಪದಲ್ಲಿ ಜವಾಬ್ದಾರಿಯುತ ಸರಕಾರಿ ಅಧಿಕಾರಿಗಳು ಸೇರಿ ಭರ್ಜರಿ ಭೋಜನದ ವ್ಯವಸ್ಥೆ ಸಹಿತ ಸಮಾರಂಭ ಏರ್ಪಡಿಸಿದರೆ….. ಇವರಿಗೆ ನೈತಿಕತೆ ಇದೆಯಾ ಎಂಬ ಪ್ರಶ್ನೆ ಜನಸಾಮಾನ್ಯರಲ್ಲೂ ಮೂಡದಿರದು.

ಮೇ 31ರಂದು ಬೆಳ್ತಂಗಡಿ ಕೃಷಿ ಇಲಾಖೆಯ ಅಧಿಕಾರಿ ಚಿದಾನಂದ ಹೂಗಾರ್ ಸೇವೆಯಿಂದ ನಿವೃತ್ತರಾಗಲಿದ್ದರು. ಅವರಿಗಾಗಿ ಬೆಳ್ತಂಗಡಿ ಕೃಷಿ ಇಲಾಖೆಯಲ್ಲಿ ಭರ್ಜರಿ ಕಾರ್ಯಕ್ರಮ. ನೂರಾರು ಮಂದಿಗೆ ಭರ್ಜರಿ ಭೋಜನ. ಈ ಕಾರ್ಯಕ್ರಮದಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಬಗ್ಗೆ ಹದ್ದಿನ ಕಣ್ಣಿಡಬೇಕಾದ ಚುನಾವಣಾ ಆಧಿಕಾರಿಗಳಾದ ಲೋಕಸಭಾ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಸಹಾಯಕ ಚುನಾವಣಾಧಿಕಾರಿಯಾಗಿ ನಿಯೋಜನೆಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಇಲಾಖೆಯ ನಿರ್ದೇಶಕ ಕೆಂಪೇಗೌಡ, ಬೆಳ್ತಂಗಡಿಯ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಸಹಿತ ಜವಾಬ್ದಾರಿಯುತ ಅಧಿಕಾರಿಗಳೇ ತಮ್ಮ ಜವಾಬ್ದಾರಿ ಮರೆತು ಭಾಗವಹಿಸುವ ಮೂಲಕ ಸರಕಾರಿ ಅಧಿಕಾರಿಗಳ ನೈತಿಕತೆಯನ್ನೇ ಅವಮಾನಿಸಿದ್ದಾರೆ.

ಈಗಾಗಲೇ ಲೋಕಸಭಾ ಚುನಾವಣೆ ಮುಗಿದಿದೆ; ಇನ್ನೊಂದೆರಡು ದಿನಗಳಲ್ಲಿ ಮತಗಳ ಎಣಿಕೆ ಕಾರ್ಯವೂ ಮುಗಿಯಲಿದೆ. ಹೀಗಿರುವಾಗ ಚುನಾವಣಾ ನೀತಿಸಂಹಿತೆ ಪಾಲಿಸದಿದ್ದರೂ ಅಪರಾಧವಲ್ಲ ಎಂದು ವಾದಿಸುವ ಕಾನೂನಿಗೆ ಗೌರವ ನೀಡದ ಕೆಲ ಸಾರ್ವಜನಿಕರು ಮತ್ತು ಸರಕಾರಿ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ.

ಅದಕ್ಕೇ ಹೇಳಿದ್ದು; ಇಲ್ಲಿರುವುದು ನೈತಿಕತೆಯ ಪ್ರಶ್ನೆ ಅಂತ. ಲೋಕಸಭಾ ಚುನಾವಣೆಯ ಒಂದು ಹಂತದ ಪ್ರಕ್ರಿಯೆ ಮುಗಿದಿರಬಹುದು. ಆದರೆ ಶಿಕ್ಷಕರ ಕ್ಷೇತ್ರ ಮತ್ತು ಪದವೀದರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗೆ ಮುಹೂರ್ತ ಸಮೀಪಿಸುತ್ತಿದೆ. ಆದ್ದರಿಂದ ಚುನಾವಣಾ ನೀತಿಸಂಹಿತೆ ಜೂನ್ 6ರ ತನಕ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಇದರ ಅರಿವಿದ್ದೂ ಜವಾಬ್ದಾರಿಯುತ ಅಧಿಕಾರಿಗಳೇ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದರೆ….. ‘ಬೇಲಿಯೇ ಎದ್ದು ಹೊಲ ಮೆದ್ದರೆ…. ಬೆಳೆಗಳ ರಕ್ಷಣೆ ಅದೆಂತು ಸಾಧ್ಯ?’ ಎಂದು ಪ್ರಶ್ನಿಸಬೇಕಾಗಿದೆ.

ಇದರೊಂದಿಗೆ ಲೋಕಸಭಾ ಚುನಾವಣೆಗೆ ಬೆಳ್ತಂಗಡಿ ತಾಲೂಕು ಚುನಾವಣಾ ನೀತಿಸಂಹಿತೆ ಅನುಷ್ಠಾನದ ನೋಡೆಲ್ ಅಧಿಕಾರಿಯಾಗಿ ನಿಯುಕ್ತಿಗೊಂಡ ಬೆಳ್ತಂಗಡಿಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೈಜಣ್ಣ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮೇ 31ರಂದು ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ್ದಲ್ಲದೇ, ಅಂದು ಮಧ್ಯಾಹ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತನ್ನ ಪ್ರಾಯೋಜಕತ್ವದಲ್ಲೇ ಭೂರಿಭೋಜನ ವ್ಯವಸ್ಥೆ ಮಾಡಿ ಚುನಾವಣಾ ನೀತಿಸಂಹಿತೆಗೇ ಸವಾಲು ಹಾಕಿದ್ದಾರೆ. ಈ ರೀತಿಯಾಗಿ ಕಾನೂನು ಪಾಲಿಸಿ, ಅನುಷ್ಠಾನಿಸಬೇಕಾದ ಸರಕಾರಿ ಅಧಿಕಾರಿಗಳೇ ಕಾನೂನಿಗೆ ಸವಾಲಾದರೆ ಕಾರ್ಯಾಂಗದ ನೈತಿಕ ಮಟ್ಟ ಕುಸಿಯುವುದರಲ್ಲಿ ಅನುಮಾನವಿಲ್ಲ.

RELATED ARTICLES
- Advertisment -
Google search engine

Most Popular