ಮೂಡುಬಿದಿರೆ: ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಇಂಟ್ರೆಸ್ಟಿಂಗ್ ಫೋಟೊ, ವಿಡಿಯೋಗಳು ವೈರಲ್ ಆಗುವುದು ಸಹಜ. ಅದರಲ್ಲೂ ಸತತ ಧಾರಾಕಾರ ಮಳೆ ಸುರಿಯುತ್ತಿರುವ ಹೊತ್ತಲ್ಲಿ, ಎಲ್ಲೋ ನಡೆದ ದುರಂತಗಳನ್ನು ಇನ್ನೆಲ್ಲಿಯದ್ದೋ ಎಂಬ ಕ್ಯಾಪ್ಶನ್‌ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದು ಸಾಮಾನ್ಯವಾಗಿ ಬಿಟ್ಟಿದೆ. ಅದೇ ರೀತಿ ಇಲ್ಲೊಂದು ಫೋಟೊ ಈಗ ಭಾರೀ ವೈರಲ್ ಆಗಿದೆ. ಸುತ್ತ ಮಳೆಯ ಕೆಸರು ಮಿಶ್ರಿತ ನೀರು ತುಂಬಿದ್ದು, ಮಧ್ಯದಲ್ಲಿ ಮಾತ್ರ ಸ್ವಚ್ಛ ನೀರು ನಿಂತಿರುವ ವಿಸ್ಮಯದ ಫೋಟೊವೊಂದು ವೈರಲ್ ಆಗಿದೆ. ಇದು ಉಪ್ಪಿನಂಗಡಿ ಬಳಿಯ ವಿಸ್ಮಯ ಎಂಬ ರೀತಿಯ ಕ್ಯಾಪ್ಶನ್‌ನೊಂದಿಗೆ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಆದರೆ ಈಗ ಈ ಫೋಟೊ ತೆಗೆದವರೇ ಇದಕ್ಕೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಹರಡಿದ್ದ ಎಲ್ಲಾ ಊಹಾಪೋಗಳಿಗೆ ತೆರೆಬಿದ್ದಿದೆ.
ಸಾಕೇತ್ ಪೂಜಾರಿ ಎಂಬವರು ಎರಡು ವರ್ಷಗಳ ಹಿಂದೆಯೇ ಕ್ಲಿಕ್ಕಿಸಿದ ಫೋಟೊ ಇದು. ಕಾರ್ಕಳ ತಾಲೂಕಿನ ಸಚ್ಚೇರಿಪೇಟೆ ಬಳಿಯ ಪೊಸ್ರಾಲ್‌ನ ಶೆಟ್ಟಿಬೆಟ್ಟು ಮಧುಸೂಧನ್ ಪೂಜಾರಿ ಅವರ ಜಮೀನಲ್ಲಿ ಕಂಡುಬಂದ ಪ್ರಕೃತಿ ವಿಸ್ಮಯದ ಫೋಟೊ ಇದು. ಸಾಕೇತ್ ಪೂಜಾರಿ ಅವರು ಈ ಫೋಟೊವನ್ನು ಎರಡು ವರ್ಷಗಳ ಹಿಂದೆಯೇ ಕ್ಲಿಕ್ಕಿಸಿದುದಾಗಿ ಹೇಳಿದ್ದಾರೆ. ದಿನಾಂಕ ಸಹಿತ ಇರುವ ಅದರ ಮೂಲ ಫೋಟೊವನ್ನೂ ಹಂಚಿಕೊಂಡಿದ್ದಾರೆ. ನಡುವೆ ತುಂಬಿದ ಬಾವಿಯ ಶುದ್ಧ ನೀರಿದ್ದು, ಸುತ್ತಲೂ ಮಳೆ ನೀರು ತುಂಬಿರುವುದು ಫೋಟೊದಲ್ಲಿ ಕಂಡುಬಂದಿರುವ ದೃಶ್ಯ. ತೋಟವೊಂದರಲ್ಲಿ ತೆಗೆದಿರುವ ಫೋಟೊ ನೋಡಲು ರಮಣೀಯವಾಗಿದೆ.

