ಮೂಡುಬಿದಿರೆ: ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ವಿಶ್ವಕರ್ಮ ಸಭಾಭವನ ಅ.20ರಂದು ಲೋಕಾರ್ಪಣೆಗೊಳ್ಳಲಿದೆ. ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ನೂತನ ಸಭಾಭವನ ನಿರ್ಮಾಣ ಸಮಿತಿಯು ನಿರ್ಮಿಸಿರುವ ಈ ಸಭಾಭವನ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
2015ರಲ್ಲಿ ಆಗಿನ ಆಡಳಿತ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆಯಲ್ಲಿ ನಡೆದ ಭೂವರಾಹ ಯಜ್ಞದಂದು ಜಗದ್ಗುರು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಭೂಮಿ ಪೂಜೆ ನಡೆಸಿದ್ದರು. ಆಕರ್ಷಕ ವಿನ್ಯಾಸದೊಂದಿಗೆ ನಿರ್ಮಿಸಿರುವ ಈ ಸಭಾಭವನವು 15 ಸಾವಿರ ಚದರಅಡಿ ವಿಸ್ತೀರ್ಣ ಹೊಂದಿದೆ. ಬಾಲ್ಕನಿ ಸಹಿತ 1 ಸಾವಿರ ಮಂದಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, 5 ಸಾವಿರ ಚದರ ಅಡಿಯ ಭೋಜನಾಲಯ, ಪ್ರತ್ಯೇಕ ಸ್ಟೋರ್‌ರೂಂ, ಅಡುಗೆ ಸಾಮಾಗ್ರಿಗಳ ಕೊಠಡಿ, 40ಕೆವಿ ಜನರೇಟರ್, 350 ಚದರ ಅಡಿಯ ವಧೂ ವರರ ಕೊಠಡಿಗಳನ್ನು ನಿರ್ಮಿಸಲಾಗಿದೆ. 5 ಅತಿಥಿ ಗೃಹಗಳನ್ನು ಹೊಂದಿದೆ. ಕ್ಷೇತ್ರಕ್ಕೆ ಭೇಟಿ ನೀಡುವ ಗುರುಗಳಿಗೆ ತಂಗಲು ಪ್ರತ್ಯೇಕ ಗುರುಧ್ಯಾನ ಮಂದಿರವನ್ನು ನಿರ್ಮಿಸಲಾಗಿದೆ. ಜೊತೆಗೆ ವಿಶಾಲ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ.
ಅ. 20ರಂದು ಬೆಳಿಗ್ಗೆ 7.30ಕ್ಕೆ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಮಹಾಪೂಜೆಯು ನಡೆಯಲಿದ್ದು, ಬೆಳಿಗ್ಗೆ 9.30ಕ್ಕೆ ಜಗದ್ಗುರು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಮತ್ತು ಅರಕಲಗೂಡು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಪೀಠದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರು ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಸಮಿತಿಯ ಅಧ್ಯಕ್ಷ ಪುರೋಹಿತ ಎನ್. ಜಯಕರ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಸಭಾಭವನ ನಿರ್ಮಾಣದ ನೇತೃತ್ವ ವಹಿಸಿರುವ ಪುರೋಹಿತ ಎನ್. ಜಯಕರ ಆಚಾರ್ಯ, ಕಟ್ಟಡದ ಸಿವಿಲ್ ಇಂಜಿನಿಯರ್ ಬೆಳುವಾಯಿ ಸುಂದರ ಜಿ. ಆಚಾರ್ಯ ಹಾಗೂ ಪ್ರಮುಖ ದಾನಿ ಉಜಿರೆ ಆನಂದ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು ಹಾಗೂ ದಾನಿಗಳನ್ನು ಗೌರವಿಸಲಾಗುವುದು ಸಂಜೆ 3.00ಕ್ಕೆ ಕಾಳಿಕಾಂಬಾ ಯಕ್ಷಗಾನ ಕಲಾಸಂಘದ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ಜಾಂಬವತಿ ಕಲ್ಯಾಣ ನಡೆಯಲಿದೆ ಎಂದು ಸಭಾಭವನ ನಿರ್ಮಾಣ ಸಮಿತಿಯ ಪ್ರಕಟಣೆಯು ತಿಳಿಸಿದೆ.
ಮೂಡುಬಿದಿರೆ | ಅ.20ರಂದು ಶ್ರೀ ವಿಶ್ವಕರ್ಮ ಸಭಾಭವನ ಲೋಕಾರ್ಪಣೆ
RELATED ARTICLES