“ರಕ್ತದಾನ ಅತ್ಯಂತ ಶ್ರೇಷ್ಠವಾದದ್ದು, ಯುವಜನರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದ ತುರ್ತು ಅವಶ್ಯಕತೆ ಇರುವವರ ಅಮೂಲ್ಯ ಜೀವವನ್ನು ಉಳಿಸುವುದರೊಂದಿಗೆ ತಮ್ಮ ಆರೋಗ್ಯವನ್ನೂ ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತದೆ.” ಎಂದು ಪ್ರಖ್ಯಾತ ರಕ್ತದಾನಿ, ಸಮಾಜ ಸೇವಕ, ಮುಡಾರು ಶಾಲಾ
ಮುಖ್ಯೋಪಧ್ಯಾಯರಾದ ದೇವದಾಸ್ ಪಾಟ್ಕರ್ ರವರು ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡುವುದನ್ನು ಒಂದು ಹವ್ಯಾಸವನ್ನಾಗಿ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ
ಅವರು ತಿಳಿಸಿದರು. ಕಾಲೇಜಿನ ಐ.ಕ್ಯು.ಎ.ಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಯುವ ರೆಡ್ ಕ್ರಾಸ್, ರೋರ್ಸ್- ರೋರ್ಸ್, ರೆಡ್ ರಿಬ್ಬನ್ ಕ್ಲಬ್, ವಿದ್ಯಾರ್ಥಿ ವೇದಿಕೆ ಹಾಗೂ ರೋರ‍್ಯಾಕ್ಟ್ ಕ್ಲಬ್ ಗಳ ಸಹಯೋಗದೊಂದಿಗೆ ಕೆ.ಎಂ.ಸಿ.ಮಣಿಪಾಲ್ ರಕ್ತ ನಿಧಿ ಘಟಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್’ ಉಡುಪಿ, ಇವರ ನೇತೃತ್ವದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸತೀಷ್ ಸಾಲಿಯಾನ್ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ರಕ್ತದಾನದ ಧ್ಯೇಯೋದ್ದೇಶದ ಬಗ್ಗೆ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕಿರಣ್ ಎಂ. ರವರು, ನಿಜವಾದ ದಾನ ಎಂಬುವುದಿದ್ದರೆ ಅದು ರಕ್ತದಾನ ಮಾತ್ರ. ರಕ್ರದಾನ ಜೀವದಾನಕ್ಕೆ ಸಮಾನ. ರಕ್ತದಾನದ ಮೂಲಕ ಭಾತೃತ್ವವನ್ನು ಬೆಳೆಸಿ, ಸಾಮಾಜಿಕ ಅಸಮಾನತೆಯನ್ನು ತೊಲಗಿಸಬಹುದು ಎಂದರು. ಮಣಿಪಾಲ ಕೆ.ಎಂ.ಸಿ ರಕ್ತನಿಧಿ ಘಟಕಕದ ವೈದ್ಯಾಧಿಕಾರಿ ಡಾ| ಲಿಂಗೇಶ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರೂ, ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರೂ ಆದ ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸ್ನಾತಕೋತ್ತರ ಎಂ.ಕಾಂ ವಿಭಾಗದ ಸಂಚಾಲಕರಾದ ಪ್ರೊ. ಡಾ| ವಿದ್ಯಾಧರ ಹೆಗ್ಡೆ, ಎನ್.ಎಸ್.ಎಸ್ ಘಟಕಗಳ ಕಾರ್ಯಕ್ರಮ ಸಂಯೋಜಕರಾದ ಸೌಮ್ಯ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಪ್ರಸನ್ನ, ಐ.ಕ್ಯು.ಎ.ಸಿ ಸಂಚಾಲಕರಾದ ಸುಷ್ಮಾ ರಾವ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದು, ಶಿಬಿರವನ್ನು ನಡೆಸಲು ಮಾರ್ಗದರ್ಶನ ನೀಡಿದರು. ಕು. ಸಂಗೀತ ಮತ್ತು ತಂಡದವರು ಪ್ರಾರ್ಥಿಸಿದರು. ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪ್ರಸನ್ನ ವಂದನಾರ್ಪಣೆಗೈದರು. ಪ್ರಥಮ ಬಿ.ಎ. ವಿದ್ಯಾರ್ಥಿ ಸೂರಜ್ ಕಾರ್ಯಕ್ರಮ ನಿರೂಪಿಸಿದರು.