ವಯನಾಡ್: ಕೇರಳದ ವಯನಾಡಿನಲ್ಲಿ ಮೊನ್ನೆ ರಾತ್ರಿ ಸಂಭವಿಸಿದ ಭಯಾನಕ ಭೂಕುಸಿತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಭೀಕರ ಭೂಕುಸಿತಕ್ಕೆ ಮೃತರ ಸಂಖ್ಯೆ 156ಕ್ಕೆ ಏರಿಕೆಯಾಗಿದೆ. 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ, ಪವಾಡ ಸದೃಶ ರೀತಿಯಲ್ಲಿ ಕನ್ನಡಿಗರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದೇ ಒಂದು ಮೆಸೇಜ್ನಿಂದ ಅವರ ಪ್ರಾಣ ಉಳಿದಿದೆ.
ಬೆಂಗಳೂರಿನ ಮಂಜುನಾಥ್ ಎಂಬವರು ಟ್ಯಾಕ್ಸಿ ಡ್ರೈವರ್ ಆಗಿ ವಯನಾಡ್ಗೆ ಹೋಗಿದ್ದರು. ಉತ್ತರ ಭಾರತದ ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರನ್ನು ವಯನಾಡ್ಗೆ ಟ್ರಿಪ್ ಗೆ ಕರೆದೊಯ್ದಿದ್ದರು. ಆ ನಾಲ್ವರು ವಯನಾಡ್ನ ರೆಸಾರ್ಟ್ ಒಂದರಲ್ಲಿ ಇದ್ದರಂತೆ. ಆದರೆ ಮಂಜುನಾಥ್ ಕಾರು ನಿಲ್ಲಿಸಿ ಅಲ್ಲೇ ನಿದ್ದೆಗೆ ಜಾರಿದ್ದರಂತೆ. ಮಧ್ಯರಾತ್ರಿ 1.15ಕ್ಕೆ ಭೂ ಕುಸಿತವಾಗಿದೆ. ಆಗ ರೆಸಾರ್ಟ್ನಲ್ಲಿದ್ದ ಹಲವರಿಗೆ ಸಂಕಷ್ಟ ಎದುರಾಗಿದೆ. ಆದರೆ ಇದ್ಯಾವುದರ ಪರಿವೇ ಇಲ್ಲದೆ ಮಂಜುನಾಥ್ ಗಾಢ ನಿದ್ದೆಗೆ ಜಾರಿದ್ದರಂತೆ.
ಭೂ ಕುಸಿತದ ಬಳಿಕ ನೀರು ವೇಗವಾಗಿ ಹರಿಯುತ್ತಿತ್ತು. ಆಗ ಮಂಜುನಾಥ್ ಅವರ ಕಾರಿಗೂ ಜಲದಿಗ್ಬಂಧನ ಉಂಟಾಗಿದೆ. ಈ ವೇಳೆ ಚಾಲಕ ತರಾತುರಿಯಲ್ಲಿ ಕಾರನ್ನು ಚಲಾಯಿಸಲು ಮುಂದಾಗಿದ್ದಾನೆ. ಕಾರು ಸ್ಟಾರ್ಟ್ ಆಗುತ್ತಿದ್ದಂತೆ ಓನರ್ ಸಚಿನ್ಗೆ ಮೆಸೇಜ್ ಹೋಗಿದೆ. ಕಾರಿನ ಜಿಪಿಎಸ್ ಆನ್ ಆಗುತ್ತಿದ್ದಂತೆ ಮೊಬೈಲ್ನಲ್ಲಿ ಓನರ್‌ಗೆ ಆಟೋಮ್ಯಾಟಿಕ್ ಮೆಸೇಜ್ ಹೋಗಿದೆ. ಹೊತ್ತಲ್ಲದ ಹೊತ್ತಲ್ಲಿ ಗಾಡಿ ಆನ್ ಆದ ಮೆಸೇಜ್ ನೋಡಿ ಓನರ್ ಶಾಕ್ ಆಗಿದ್ದಾರೆ. ಕೂಡಲೇ ಓನರ್ ಸಚಿನ್ ಚಾಲಕ ಮಂಜುನಾಥ್ಗೆ ಕಾಲ್ ಮಾಡಿದ್ದಾರೆ. ಈ ವೇಳೆ ಪ್ರವಾಹದ ಬಗ್ಗೆ ಚಾಲಕ ವಿವರಿಸಿದ್ದಾರೆ. ಆ ಕೂಡಲೇ ಚಾಲಕ ಮಂಜುನಾಥ್ಗೆ ಸಚಿನ್ ಧೈರ್ಯ ತುಂಬಿದ್ದಾರೆ. ಅದೇ ಜಾಗದಲ್ಲಿದ್ದ ತನ್ನ ಪರಿಚಯಸ್ಥರಿಗೂ ಮಾಹಿತಿ ನೀಡಿದ್ದಾರೆ. ಇದರಿಂದ ಅಲ್ಲಿನ ಜನರು ಚಾಲಕನ ಸಹಾಯಕ್ಕೆ ದೌಡಾಯಿಸಿದ್ದಾರೆ. ಹೀಗಾಗಿ ಒಂದೇ ಒಂದು ಮೆಸೇಜ್ನಿಂದ ಕಾರು ಚಾಲಕ ಪಾರಾಗಿದ್ದಾನೆ.
ಚಾಲಕ ಮಂಜುನಾಥ್ ಸೇರಿ ಒಟ್ಟು ಐದು ಮಂದಿ ವಯನಾಡ್ಗೆ ಹೋಗಿದ್ದರು. ಆದರೆ ತನ್ನ ಟ್ಯಾಕ್ಸಿಯಲ್ಲಿ ಹೋದ ಇಬ್ಬರು ಕಣ್ಮರೆಯಾಗಿದ್ದಾರೆ. ಸದ್ಯ ಇಬ್ಬರು ಯುವತಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಯುವತಿಗೆ ಐಸಿಯು, ಇನ್ನೊಬ್ಬ ಯುವತಿಗೆ ಎಮರ್ಜೆನ್ಸಿ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
