ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ನೂರಾರು ಮಂದಿ ಸಾವನ್ನಪ್ಪಿದ ನಂತರ ಭಾರೀ ಅನಾಹುತ ಸಂಭವಿಸಿದೆ. ಈ ದುರಂತದಲ್ಲಿ ಹೆತ್ತವರು ಹಾಗೂ ಕುಟುಂಬವನ್ನು ಕಳೆದುಕೊಂಡು ಅನಾಥವಾಗಿ ಕಣ್ಣೀರು ಹಾಕುತ್ತಿದ್ದಾರೆ. ಈ ಮಧ್ಯೆ ದಂಪತಿ ನಾವು ಅನಾಥ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಮುಂದೆ ಬಂದಿದ್ದಾರೆ.
ಜುಲೈ 30 ರಂದು ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, 200 ಕ್ಕೂ ಹೆಚ್ಚು ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾದವರ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ವಯನಾಡಿನ ದಂಪತಿ, ಭೂಕುಸಿತ ದುರಂತದಲ್ಲಿ ಅನಾಥವಾಗಿದ್ದ ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.
ದುರಂತದ ಹಿನ್ನೆಲೆಯಲ್ಲಿ, ಇಡುಕ್ಕಿಯ ಮಹಿಳೆ ಭಾವನಾ ಸಜಿನ್ ಅವರು ಭೂಕುಸಿತ ಪೀಡಿತ ಪ್ರದೇಶದಲ್ಲಿ ಅನಾಥ ನವಜಾತ ಶಿಶುಗಳಿಗೆ ಹಾಲುಣಿಸಲು ನಾನು ಸಿದ್ಧನಾಗಿದ್ದೇವೆ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಭಾವನಾ ‘ನಾನು ಎರಡು ಮಕ್ಕಳ ತಾಯಿ. ಹೆತ್ತವರನ್ನು ಕಳೆದುಕೊಂಡ ಶಿಶುಗಳ ನೋವು ನನಗೆ ಗೊತ್ತು. ಶಿಶುಗಳಿಗೆ ಎದೆಹಾಲು ನೀಡುವ ನನ್ನ ಆಲೋಚನೆಯನ್ನು ನಾನು ನನ್ನ ಪತಿಯೊಂದಿಗೆ ಹೇಳಿಕೊಂಡಿದ್ದೇನೆ. ಅವರು ಅದನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಭಾವನಾ ಅವರ ಈ ಘೋಷಣೆಯ ಬೆನ್ನಲ್ಲೇ, ವಯನಾಡ್‌ನ ದಂಪತಿ ವಿಪತ್ತು ವಲಯದಿಂದ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂದು ಘೋಷಿಸಿದರು.
ದಂಪತಿಯನ್ನು ಸಜಿತ್ (43) ಮತ್ತು ಅವರ ಪತ್ನಿ ನಫೀಜಾ (40) ಎಂದು ಗುರುತಿಸಲಾಗಿದ್ದು, ವಯನಾಡಿನಲ್ಲಿ ವಾಸವಾಗಿದ್ದಾರೆ. 19 ವರ್ಷದ ಯುವಕನಾಗಿದ್ದಾಗ ಆತನ ಅನುಭವವೇ ಮಗುವನ್ನು ದತ್ತು ತೆಗೆದುಕೊಳ್ಳಲು ಪ್ರೇರೇಪಿಸಿತು ಎನ್ನಲಾಗಿದೆ.
ನಫೀಸಾಳನ್ನು ಮದುವೆಯಾದ ನಂತರ, ದಂಪತಿಗೆ ಫೈಸಾ, ಫಹೀಮಾ, ಫಾಹಿದಾ ಮತ್ತು ಫಾತಿಮಾ ಎಂಬ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ತನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳ ಬೆಂಬಲದೊಂದಿಗೆ, ಸಜಿತ್ ಅವರು ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಭಾರೀ ಭೂಕುಸಿತ ದುರಂತವು 300 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ನಂತರ ಈ ಜಗತ್ತಿನಲ್ಲಿ ಕೆಲವು ಮಕ್ಕಳು ಏಕಾಂಗಿಯಾಗಿ ಉಳಿದಿದ್ದಾರೆ. ವಯನಾಡಿನಲ್ಲಿ ನಡೆದ ದುರಂತ ಘಟನೆಯ ನಂತರ ನೋಡಿಕೊಳ್ಳಲು ಯಾರೂ ಇಲ್ಲದ ಮಗುವಿಗೆ ಪೋಷಕರ ಪ್ರೀತಿ ಮತ್ತು ಆಶ್ರಯವನ್ನು ನೀಡಲು ನಾವು ಸಿದ್ಧರಾಗಿದ್ದೇವೆ ಎಂದು ಹೇಳಿಕೊಳ್ಳುವ ಮೂಲಕವಾಗಿ ಮಾನವೀಯ ಕಾರ್ಯಕ್ಕೆ ಸಜ್ಜಾಗಿ ನಿಂತಿದ್ದಾರೆ. ಈ ದಂಪತಿಯ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.