ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಹವಾನಿಯಂತ್ರಿತ, ಮೊಡ್ಯುಲಾರ್ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಹೊಂದಿರುವ ಸೂಪರ್ ಸ್ಪೆಶಾಲಿಟಿ ಸರ್ಜಿಕಲ್ ಕಟ್ಟಡವು ನಾಳೆ (ಆ.15) ಉದ್ಘಾಟನೆಯಾಗಲಿದೆ. ಒಟ್ಟು ಏಳು ಅಂತಸ್ತುಗಳ ಕಟ್ಟಡದಲ್ಲಿ ನಾಲ್ಕು ಅಂತಸ್ತು ಪೂರ್ಣಗೊಂಡಿದ್ದು, ಸ್ಮಾರ್ಟ್ ಸಿಟಿ ಅನುದಾನದಲ್ಲಿ 56 ಕೋಟಿ ವೆಚ್ಚ ಮಾಡಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಕಟ್ಟಡದ ಉದ್ಘಾಟನೆ ನಡೆಯಲಿದೆ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ಜೆಸಿಂತಾ ಡಿಸೋಜ ಹೇಳಿದ್ದಾರೆ.
ಪ್ರಸ್ತುತ ಈ ಕಟ್ಟಡದಲ್ಲಿ 250 ಹಾಸಿಗೆಗಳ ಸೌಲಭ್ಯವಿರಲಿದ್ದು, ತಳ ಅಂತಸ್ತಿನಲ್ಲಿ ಕ್ಯಾಥ್ ಲ್ಯಾಬ್ ಮತ್ತು ರೇಡಿಯಾಲಜಿ ವಿಭಾಗಗಳಿವೆ. ನೆಲ ಅಂತಸ್ತಿನಲ್ಲಿ 15 ಹಾಸಿಗೆಗಳ ತುರ್ತು ಚಿಕಿತ್ಸಾ ವಿಭಾಗ, 8 ಹಾಸಿಗೆಗಳ ತುರ್ತು ಚಿಕಿತ್ಸಾ ಐಸಿಯು, ಎಂಡೋಸ್ಕೋಪಿ ಮತ್ತು ತುರ್ತು ಚಿಕಿತ್ಸಾ ಕೊಠಡಿಗಳು, ಒಂದನೇ ಮಹಡಿಯಲ್ಲಿ 60 ಹಾಸಿಗೆಗಳ ಇಎನ್‌ಟಿ ಮತ್ತು ಯುರಾಲಜಿ ವಾರ್ಡ್‌ಗಳು, ಎರಡನೇ ಮಹಡಿಯಲ್ಲಿ 70 ಹಾಸಿಗೆಗಳ ನ್ಯೂರೊ ಸರ್ಜರಿ, ಕಾರ್ಡಿಯೊಥೋರಾಸಿಕ್ ಸರ್ಜರಿ ಮತ್ತು ಕಣ್ಣಿನ ಶಸ್ತ್ರಚಿಕಿತ್ಸಾ ವಾರ್ಡ್ ಗಳು ಇವೆ. 3 ಮತ್ತು 4ನೇ ಅಂತಸ್ತಿನಲ್ಲಿ ತಲಾ 5ರಂತೆ ಒಟ್ಟು 10 ಶಸ್ತ್ರ ಚಿಕಿತ್ಸಾ ಕೊಠಡಿಗಳಿರಲಿವೆ. ತಲಾ 10 ಹಾಸಿಗೆಗಳ ಶಸ್ತ್ರ ಚಿಕಿತ್ಸಾ ಪೂರ್ವ ಮತ್ತು 15 ಹಾಸಿಗೆಗಳ ಶಸ್ತ್ರ ಚಿಕಿತ್ಸಾ ನಂತರದ ವಾರ್ಡ್ ಲಭ್ಯವಿರಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುತುವರ್ಜಿ ವಹಿಸಿ ಹಲವು ಅನುದಾನಗಳನ್ನು ದೊರಕಿಸಿಕೊಟ್ಟಿದ್ದಾರೆ. ಸ್ಮಾರ್ಟ್ ಸಿಟಿ ವತಿಯಿಂದ 7 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ವೈದ್ಯಕೀಯ ಯಂತ್ರೋಪಕರಣ ಒದಗಿಸಿದ್ದಾರೆ. ಸರ್ಕಾರದ ವತಿಯಿಂದ 2 ಕೋಟಿ ರೂ, ಕೆಎಂಸಿ ವತಿಯಿಂದ 4 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಪೂರೈಕೆಯಾಗಿವೆ ಎಂದು ಅವರು ತಿಳಿಸಿದರು. ಡಾ. ನವೀನ್, ಡಾ. ಸದಾನಂದ ಪೂಜಾರಿ ಉಪಸ್ಥಿತರಿದ್ದರು.