ಉಡುಪಿ: ಗಣರಾಜ್ಯೋತ್ಸವ ಪರೇಡ್ ವೇಳೆ ಕೇರಳ ರಾಜ್ಯದ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಯಾವ ಮುಖ ಹೊತ್ತು ಮಂಗಳೂರಿನ ಲೇಡಿಹಿಲ್ ಸರ್ಕಲ್ ನಲ್ಲಿ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿದ್ದ ಬಿಜೆಪಿ ಸರಕಾರ, ಕೇಂದ್ರ ಸರಕಾರ ಈ ಹಿಂದೆ ಬಿಲ್ಲವ ಸಮುದಾಯವನ್ನು ಅವಮಾನಿಸಿಕೊಂಡು ಬಂದಿದೆ ಎಂದು ಅವರು ಹೇಳಿದ್ದಾರೆ. ಬಿಲ್ಲವ ಸಮುದಾಯದವರೇ ಆದ ಗೋಪಾಲ ಪೂಜಾರಿ, ವಿನಯ ಕುಮಾರ್ ಸೊರಕೆ, ರಕ್ಷಿತ್ ಶಿವರಾಮ್ ಅವರನ್ನು ಸೋಲಿಸುವಂತೆ ಕರೆ ನೀಡಿದ್ದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ತಾವೂ ಬಿಲ್ಲವ ಜಾತಿಯವರು ಎನ್ನುವುದು ಮರೆತು ಹೋಗಿತ್ತು. ಜನಾರ್ಧನ ಪೂಜಾರಿಯವರನ್ನು ಸೋಲಿಸಲೂ ಶ್ರೀನಿವಾಸ ಪೂಜಾರಿ ಮನೆಮನೆಗೆ ತೆರಳಿ ಪ್ರಚಾರ ಮಾಡಿದ್ದರು ಎಂದು ಅವರು ನೆನಪಿಸಿದ್ದಾರೆ. ಮೋದಿಯವರು ಮಂಗಳೂರಿಗೆ ಬಂದರೆ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವುದಿಲ್ಲ ಎಂಬ ಕಾರಣಕ್ಕಾಗಿ ಸಾರ್ವಜನಿಕ ಸಭೆಯ ಬದಲು ರೋಡ್ ಶೋ ಮೂಲಕ ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡುವ ನಾಟಕ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.