ಪ್ರತಿ ವರ್ಷ ವಿಶ್ವದಾದ್ಯಂತ ಜೂನ್ 21 ರಂದು ವಿಶ್ವಯೋಗ ದಿನ ಎಂದು ಆಚರಿಸಿ, ಭಾರತದ ಪುರಾತನ ಜೀವನಶೈಲಿಯ ಭಾಗವಾದ ಯೋಗವನ್ನು ಜಗತ್ತಿಗೆ ಪರಿಚಯಿಸಿ, ಯೋಗದಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಮಹೋನ್ನತ ಉದ್ದೇಶವನ್ನು ಹೊಂದಿದೆ. ವಿಶ್ವಯೋಗ ದಿನದ ಆಚರಣೆಯನ್ನು ಭಾರತದ ನೇತೃತ್ವದಲ್ಲಿಅಮೇರಿಕ ದೇಶ 2015 ರಲ್ಲಿ ಆರಂಭಿಸಿತು.
ಜೂನ್ 21 ರಂದೇ ಯಾಕೆ?
ಜೂನ್ 21 ರಂದು ವಿಶೇಷವಾದ ದಿನವಾಗಿದ್ದುಉತ್ತರ ಗೋಳಾರ್ದದ ಬೇಸಗೆಯ ಆಯನ ಸಂಕ್ರಾಂತಿಯ ಅತೀ ಹೆಚ್ಚು ಬೆಳಕು ಇರುವ ದಿನವಾಗಿದ್ದು ಸೂರ್ಯನು ಭೂಮಿಯ ಮಧ್ಯ ಭಾಗದಿಂದ ಅತೀ ಹೆಚ್ಚು ದೂರವಿರುವ ದಿನವಾಗಿರುತ್ತದೆ. ಈ ದಿನಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಮಹತ್ವವಿದೆ.ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014, ಸೆಪ್ಟೆಂಬರ್ 27ರಂದು ನಡೆದ ಯುನೈಟೆಡ್ ನೇಷನ್ಸ್ನ ಜನರಲ್ ಅಸೆಂಬ್ಲಿಯಲ್ಲಿ ಈ ವಿಚಾರ ಪ್ರಸ್ತಾಪಿಸಿ, ಜೂನ್ 21 ರಂದು ವಿಶ್ವಯೋಗ ದಿನ ಆಚರಿಸಬೇಕು ಎಂದು ಪ್ರಸ್ತಾಪನೆ ಇಟ್ಟರು.ಈ ಪ್ರಸ್ತಾಪನೆಯನ್ನು ಡಿಸೆಂಬರ್ 11,2014 ರಲ್ಲಿ ಅತೀ ಹೆಚ್ಚು ಕರತಾಡನದೊಂದಿಗೆ ಅಂಗೀಕರಿಸಿ, ವಿಶ್ವದ 177 ರಾಷ್ಟ್ರಗಳು ಈ ವಿಶ್ವಯೋಗ ದಿನಕ್ಕೆ ಅನುಮೋದನೆ ನೀಡಲಾಯಿತು. ಯೋಗ ಎನ್ನುವುದು ಪುರಾತನ ಭಾರತದ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದ್ದು 500 ವರ್ಷಗಳ ಇತಿಹಾಸ ಹೊಂದಿದೆ.ಮಾನಸಿಕ ದೈಹಿಕ ಮತ್ತುಆಧ್ಯಾತ್ಮಿಕ ಆಯಾಮಗಳಿಂದ ಮನುಷ್ಯ ಪರಿಪೂರ್ಣ ಬೆಳವಣಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ಯೋಗ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ . ಯೋಗ ಎನ್ನುವ ಶಬ್ದ ‘ಯುಜ್’ ಎಂಬ ಸಂಸ್ಕೃತ ಮೂಲ ದಿಂದ ಹುಟ್ಟಿದ್ದು, ಕೂಡಿಸು, ಜೋಡಿಸು, ಸೇರಿಸು ಎಂಬ ಮೂಲಾರ್ಥವನ್ನು ನೀಡುತ್ತದೆ. ದೇಹ ಬುದ್ಧಿ, ಮನಸ್ಸನ್ನುಒಟ್ಟುಗೂಡಿಸುವ ಪ್ರಕ್ರಿಯೆಯೇ ಯೋಗವಾಗಿರುತ್ತದೆ.
ಅಷ್ಟಾಂಗ ಯೋಗ
ಮಹರ್ಷಿ ಪತಂಜಲಿಯವರಿಂದ ಪ್ರತಿಪಾದಿಸಲ್ಪಟ್ಟ ಅಷ್ಟಾಂಗ ಯೋಗದಲ್ಲಿ 8 ಕಂಬಗಳಿದ್ದು ಯಮ(ನಿರ್ಬಂಧಗಳು), ನಿಯಮ( ಆಚರಣೆಗಳು), ಆಸನ(ದೈಹಿಕ ಭಂಗಿಗಳು), ಪ್ರಾಣಾಯಾಮ(ಉಸಿರಾಟ ನಿಯಂತ್ರಣ), ಪ್ರತ್ಯಾಹಾರ(ಇಂದ್ರೀಯಗಳ ಹಿಂತೆಗೆದುಕೊಳ್ಳುವಿಕೆ), ಧಾರಣ (ಏಕಾಗ್ರತೆ), ಧ್ಯಾನ ಮತ್ತು ಸಮಾಧಿಎಂದು ಹೆಸರಿಸಲಾಗಿದೆ. ದೇಹ ಮತ್ತು ಮನಸ್ಸುಗಳ, ಆತ್ಮ ಮತ್ತು ಪರಾಮಾತ್ಮರ ಕೂಡುವಿಕೆಯೇ ಯೋಗ ಆಗಿರುತ್ತದೆ. ಯೋಗ ಎನ್ನುವುದು ದೈಹಿಕ, ಮಾನಸಿಕ ಮತ್ತುಆಧ್ಯಾತ್ಮಿಕ ಅಭ್ಯಾಸವಾಗಿದ್ದು, ಯೋಗಕ್ಕೆ ಯಾವುದೇ ಜಾತಿ, ಮತ, ಧರ್ಮ, ವರ್ಣಗಳ ಭೇದ ಭಾವವಿಲ್ಲ ಮತ್ತು ಹೆಣ್ಣು ಗಂಡು ಎನ್ನುವ ತಾರತಮ್ಯವಿಲ್ಲದೆ ಎಲ್ಲಾ ವಯಸ್ಸಿನ ಆಸಕ್ತಿ ಇರುವ ಯಾರೂ ಬೇಕಾದರೂ ಅಭ್ಯಾಸಿಸಬಹುದಾಗಿದೆ. ಭಾರತದ ಸನಾತನ ಸಂಸೃತಿಯಲ್ಲಿ ಪತಾಂಜಲಿ ಮಹರ್ಷಿಯನ್ನು ಯೋಗದ ಪಿತಾಮಹ ಎಂದು ಕರೆಯಲಾಗುತ್ತದೆ. ಪ್ರತಿ ಭಾರಿ ಯೋಗಭ್ಯಾಸ ಮಾಡವಾಗಲೂ ಪತಂಜಲಿ ಸೂತ್ರ ಪಠಿಸಿ, ಯೋಗಭ್ಯಾಸ ಮಾಡಲು ಆರಂಭಿಸಲಾಗುತ್ತದೆ. ಒಟ್ಟಿನಲ್ಲಿ ಈ ಭೂಮಿ ಮೇಲೆ ಹುಟ್ಟಿದ ಬಳಿಕ ಎದುರಾಗುವ ಎಲ್ಲಾ ಕಷ್ಟ, ನಷ್ಟ, ದುಗುಡ, ದುಮ್ಮಾನ, ನೋವು, ನಲಿವುಗಳಿಗೆ ಈ ಸೃಷ್ಟಿಯಲ್ಲಿ ಸಿಗುವ ಏಕೈಕ ಪರಿಹಾರ ‘ಯೋಗ’ ಎಂದು ಪುರಾತನ ಗ್ರಂಥಗಳಲ್ಲಿ ಸಾರಿ ಹೇಳಲಾಗಿದೆ.
ಯೋಗದ ಪ್ರಯೋಜನಗಳು:
1. ಯೋಗದಿಂದ ಪರಿಪೂರ್ಣ ಆರೋಗ್ಯ ಸಿದ್ದಿಯಾಗುತ್ತದೆ. ಆರೋಗ್ಯ ಎನ್ನುವುದು ಕೇವಲ ರೋಗದ ಅನುಪಸ್ಥಿತಿಯಲ್ಲ.ಅದು ಜೀವನದ ಕ್ರೀಯಾತ್ಮಕ ಅಭಿವ್ಯಕ್ತಿಯಾಗಿರುತ್ತದೆ. ಮತ್ತು ಜೀವನೋತ್ಸಾಹ ಹೆಚ್ಚಿಸುವ ಪ್ರಕ್ರಿಯೆಯಾಗಿರುತ್ತದೆ. ಯೋಗದಿಂದ ವ್ಯಕ್ತಿಯ ದೈಹಿಕ ಮಾನಸಿಕ ಮತ್ತುಆಧ್ಯಾತ್ಮಿಕ ಆರೋಗ್ಯ ವೃದ್ಧಿಯಾಗಿ, ಜೀವನೋತ್ಸಾಹ ಇಮ್ಮಡಿಯಾಗಿ ಬದುಕು ಹಸನಾಗುತ್ತದೆ.
2. ದಿನನಿತ್ಯ ಯೋಗ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಕೆಲಸದಲ್ಲಿ ಆಸಕ್ತಿ ಹೆಚ್ಚಿಸುತ್ತದೆ.
3. ದಿನನಿತ್ಯ ಯೋಗ ಮಾಡುವುದರಿಂದ ದೇಹದ ತೂಕ ನಿಯಂತ್ರಣಗೊಂಡು ಹಲವಾರು ಜೀವನಶೈಲಿಯ ರೋಗಗಳಾದ ಮಧುಮೇಹ, ಅಧಿಕರಕ್ತದೊತ್ತಡ, ಮಾನಸಿಕ ಖಿನ್ನತೆ, ಹೃದಯಾಘಾತ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
4. ಯೋಗ ಮಾಡುವುದರಿಂದ ದೇಹದರೋಗ ನಿರೋಧಕ ಶಕ್ತಿ ವೃಧ್ಧಿಸುತ್ತದೆ. ಯೋಗ ಪ್ರಾಣಯಾಮ ಮತ್ತು ಧ್ಯಾನ ನಿರಂತರವಾಗಿ ಮಾಡುವುದರಿಂದ ದೇಹ ಮನಸ್ಸು ಮತ್ತು ಆತ್ಮಗಳ ನಡುವೆ ಹೊಂದಾಣಿಕೆ ಉಂಟಾಗಿ ಪರಿಪೂರ್ಣ ಆರೋಗ್ಯಕ್ಕೆ ಧನಾತ್ಮಕ ಮುನ್ನುಡಿ ಬರೆಯುತ್ತದೆ.
5. ಯೋಗದಿಂದ ಮಾನಸಿಕ ಶಾಂತಿ ನೆಮ್ಮದಿ ದೊರಕಿ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು ವೃದ್ಧಿಸಿ ಆರೋಗ್ಯ ಪೂರ್ಣಕುಟುಂಬ ಮತ್ತು ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ.
6. ಯೋಗದಿಂದ ಅಂತಃಪ್ರಜ್ಞೆ ಸುಧಾರಿಸಿ ನಮ್ಮನ್ನು ನಾವು ಅರಿತುಕೊಳ್ಳಲು ಮತ್ತು ಯಾವ ಕೆಲಸವನ್ನು ಯಾವಾಗ ಹೇಗೆ, ಯಾಕೆ, ಮಾಡಬೇಕು ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ ಮತ್ತು ಸಮಾಜದ ಸತ್ಪ್ರಜೆ ಯನ್ನಾಗಿಸುತ್ತದೆ ಎಂದರೂ ತಪ್ಪಾಗಲಾರದು.
ಕೊನೆಮಾತು :-
2024 ರ ವಿಶ್ವರಯೋಗದಿನ ಆಚರಣೆಯ ಧ್ಯೇಯ ವಾಕ್ಯ “ಮಹಿಳಾ ಸಬಲೀಕರಣಕ್ಕಾಗಿ ಯೋಗ” ಎಂಬುದಾಗಿದೆ.“ಯೋಗದಿಂದ ರೋಗ ದೂರ” ಎಂಬ ಹಿರಿಯರ ಮಾತಿನಂತೆ ಯಾವುದೇ ಜಾತಿ ಮತ, ಧರ್ಮ, ಲಿಂಗಗಳ ಬೇಧವಿಲ್ಲದೆ ನಾವೆಲ್ಲಾ ದಿನನಿತ್ಯ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಮಾಡುತ್ತಾ ನಮ್ಮ ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಅಮರತ್ವವನ್ನು ಪಡೆಯೋಣ.ಅದರಲ್ಲಿಯೇ ನಮ್ಮ ಮತ್ತು ವಿಶ್ವದ ಶಾಂತಿ ಅಡಗಿದೆ.
