ಬಂಟ್ವಾಳ: ‘ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ’ಕ್ಕೆ ಚಾಲನೆ
ಬಂಟ್ವಾಳ: ಪರಿಶುದ್ಧ ಗಂಗೆ ಸ್ವರೂಪದಂತಿರುವ ಹಿಂದೂ ಧರ್ಮದ ಮೇಲೆ ನಿರಂತರ ವಿವಿಧ ರೀತಿಯಲ್ಲಿ ಆಘಾತ ನಡೆಯುತ್ತಿದೆ. ಹೋಳಿ, ದೀಪಾವಳಿ ಮತ್ತಿತರ ಹಬ್ಬಗಳ ಆಚರಣೆ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಅವಹೇಳನ ಮತ್ತು ಅಪಹಾಸ್ಯ ಪ್ರಸಾರ ಮಾಡಲಾಗುತ್ತಿದೆ. ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆಯೂ ದಾಳಿ ನಡೆಯುತ್ತಿದ್ದರೂ ಮೌನ ತಾಳುವ ಬದಲಾಗಿ ಸಮಸ್ತ ಹಿಂದೂ ಸಮಾಜ ಸಂಘಟಿತರಾಗಿ ಎದ್ದು ನಿಂತರೆ ಕೆಲವೊಂದು ಮಂದಿಗೆ ತಳಮಳ ಮತ್ತು ಅಸೂಯೆ ಏಕೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಎಡಪಂಥೀಯರು ‘ಕ್ರಿಟಿಕಲ್ ರೇಸ್ ಥಿಯರಿ’ ಮೂಲಕ ಹಿಂದೂಗಳನ್ನು ಜಾತಿ- ಮತ -ಪಂಥಗಳ ಹೆಸರಿನಲ್ಲಿ ವಿಭಜನೆ ಮಾಡುತ್ತಿದ್ದಾರೆ. ಇದಕ್ಕಾಗಿ ಅಮೇರಿಕಾ ಪ್ರಾಯೋಜಿತ ಮತಾಂತರ ಮತ್ತು ದೇಶ ವಿರೋಧಿ ಷಡ್ಯಂತ್ರಕ್ಕೆ ಹಿಂದೂ ಸಮಾಜ ವ್ಯಾಪಕವಾಗಿ ಬಲಿಯಾಗುತ್ತಿದೆ ಎಂದು ಅವರು ಆರೋಪಿಸಿದರು.
ಆರಂಭದಲ್ಲಿ ಶಂಖನಾದ ಮತ್ತು ವೇದಮಂತ್ರ ಪಠಣಗಳೊಂದಿಗೆ ಉಡುಪಿ ಅದಮಾರು ಮಠದ ಈಶಪ್ರಿಯತೀರ್ಥ ಶ್ರೀಪಾದರು ಅಧಿವೇಶನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸನಾತನ ಸಂಸ್ಥೆಯ ಸಂತ ರಮಾನಂದ ಗೌಡ, ಹೈಕೋರ್ಟು ವಕೀಲ ಕೃಷ್ಣಮೂರ್ತಿ, ಉದ್ಯಮಿ ಎಂ. ಜೆ. ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರ ಗುರುಪ್ರಸಾದ್ ಗೌಡ ಮತ್ತಿತರರು ಮಾತನಾಡಿದರು.