ಬೆಂಗಳೂರು: ಜೈಲುಗಳೆಂದರೆ ಸಾಮಾನ್ಯರ ದೃಷ್ಟಿಕೋನದಲ್ಲಿ ಕ್ರಿಮಿನಲ್‌ಗಳು, ಆರೋಪಿಗಳು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟುಕೊಂಡು, ಮನಪರಿವರ್ತನೆ ಆಗುವವರೆಗೆ ದುಃಖದಲ್ಲಿ ದಿನ ಕಳೆಯುತ್ತಿರುತ್ತಾರೆ ಎಂಬ ಭಾವನೆ ಇದೆ. ನಮ್ಮ ಸಿನೆಮಾಗಳೂ ಇದನ್ನೇ ಬಿಂಬಿಸಿಕೊಂಡು ಬಂದಿವೆ. ಹೀಗಾಗಿ ಜೈಲುಗಳ ಬಗ್ಗೆ ಜನರ ಕಲ್ಪನೆಯೇ ಬೇರೆಯದ್ದಿದೆ. ಆದರೆ ನಟ ದರ್ಶನ್ ಕೇಸಿನಿಂದ ಜೈಲಿನ ಬಗ್ಗೆ ಇದ್ದ ಜನರ ಭಾವನೆಗಳೇ ಬದಲಾಗುತ್ತಿದೆ. ಅದರಲ್ಲೂ ಇದೀಗ ಹೊಸ ಫೋಟೊ ಒಂದು ವೈರಲ್ ಆಗಿದ್ದು, ಅದರಲ್ಲಿ ರೌಡಿಶೀಟರ್‌ಗಳು ಬ್ರಾಂಡೆಡ್ ಬಟ್ಟೆ, ಚಪ್ಪಲಿ ಧರಿಸಿಕೊಂಡು ಫೋಟೊ ಶೂಟ್‌ಗೆ ಪೋಸು ಕೊಡುವ ರೀತಿ ಪೋಸು ಕೊಟ್ಟಿರುವುದು ಹೊಸ ಚರ್ಚೆಗಳನ್ನು ಹುಟ್ಟು ಹಾಕಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳು, ವಿಚಾರಣಾಧೀನ ಕೈದಿಗಳು ಬಿಂದಾಸ್ ಆಗಿದ್ದಾರೆ ಎಂಬುದು ನಿನ್ನೆ ದರ್ಶನ್ ಫೋಟೊ ವೈರಲ್ ಆದ ಬಳಿಕ ಸಾರ್ವಜನಿಕರಿಗೆ ಅನಿಸಿದೆ. ಇದರ ನಡುವೆ, ಮತ್ತೊಂದು ಫೋಟೊದಲ್ಲಿ ಕೈದಿಗಳು ಗೋವಾ ಟ್ರಿಪ್‌ಗೆ ಹೊರಟಿರುವಂತೆ, ಶಾಟ್ಸ್, ಬ್ರಾಂಡೆಡ್ ಟೀ ಶರ್ಟ್ಸ್, ಬ್ರಾಂಡೆಡ್ ಚಪ್ಪಲಿ ಧರಿಸಿ ಫೋಟೊಗೆ ಪೋಸ್ ನೀಡಿದ್ದಾರೆ. ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿರುವ ವಿಲ್ಸನ್ ಗಾರ್ಡನ್ ನಾಗ ಆಂಡ್ ಟೀಂನ ಫೋಟೊ ಶೂಟ್ ಇದು ಎನ್ನಲಾಗಿದೆ. ಈ ರೀತಿ ಫೋಟೊ ಶೂಟ್ ಮಾಡಿ ಹೊರಗಿರುವ ವಿರೋಧಿ ಗ್ಯಾಂಗ್‌ಗೆ ಟಾಂಗ್ ಕೊಡುವುದು ಟೀಂನ ಉದ್ದೇಶ ಎನ್ನಲಾಗಿದೆ. ಜೈಲಲ್ಲೂ ತಮ್ಮ ಖದರ್ ಹೇಗಿದೆ ಎಂದು ತೋರಿಸಿಕೊಳ್ಳಲು ಈ ರೀತಿ ಫೋಟೊ ಶೂಟ್ ಮಾಡಿಸಿ ವಿರೋಧಿ ಗ್ಯಾಂಗ್‌ಗೆ ಕಳುಹಿಸಿ, ಬಿಲ್ಡಪ್ ತೆಗೆದುಕೊಳ್ಳುವುದು ಇದರ ಉದ್ದೇಶ ಎನ್ನಲಾಗಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಸಿದ್ದಾಪುರ ಮಹೇಶ್ ನನ್ನು ವಿಲ್ಸನ್ ಗಾರ್ಡನ್ ನಾಗನ ಟೀಂ ಕೊಚ್ಚಿ ಕೊಲೆ ಮಾಡಿತ್ತು. ಅರೋಪಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದ ಕೇವಲ ಇನ್ನೂರು ಮೀಟರ್ ಅಂತರದಲ್ಲೇ ಮಹೇಶನನ್ನು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಬರೋಬ್ಬರಿ ಇಪ್ಪತ್ತು ಜನರ ಬಂಧನವಾಗಿದೆ.