Tuesday, April 22, 2025
Homeಹಾಸನಮಗನ ಸಾವಿಗೆ ಮಾಟ ಮಂತ್ರ ಆರೋಪ: ಒಡ ಹುಟ್ಟಿದ ಅಕ್ಕನಿಗೆ ವಿಷ ಹಾಕಿದ ತಮ್ಮ

ಮಗನ ಸಾವಿಗೆ ಮಾಟ ಮಂತ್ರ ಆರೋಪ: ಒಡ ಹುಟ್ಟಿದ ಅಕ್ಕನಿಗೆ ವಿಷ ಹಾಕಿದ ತಮ್ಮ

ಹಾಸನ : ಅವರಿಬ್ಬರು ಒಡ ಹುಟ್ಟಿದ ಅಕ್ಕ ತಮ್ಮ ಆದರೆ ಆಸ್ತಿಗಾಗಿ ದಾಯಾದಿಗಳ ನಡುವೆ ಶುರುವಾದ ಕಲಹ ಶತೃತ್ವಕ್ಕೆ ತುರುಗಿದೆ. ಮಗ ಅನಾರೋಗ್ಯದಿಂದ ಬಲಿಯಾದರೆ ಅದಕ್ಕೆ ಅಕ್ಕ ಮಾಡಿಸಿದ ಮಾಟ ಮಂತ್ರವೇ ಕಾರಣ ಎಂದು ರೊಚ್ಚಿಗೆದ್ದ ತಮ್ಮ, ಮನೆಗೆ ನುಗ್ಗಿ ಗಲಾಟೆಮಾಡಿದ್ದಲ್ಲದೆ, ಒಡ ಹುಟ್ಟಿದ ಅಕ್ಕನಿಗೆ ವಿಷ ಹಾಕಿದ್ದಾನೆ. ತಮ್ಮನ ಕ್ರೌರ್ಯಕ್ಕೆ ಅಸ್ವಸ್ಥಗೊಂಡಿದ್ದ ಸಹೋದರಿ ನಾಲ್ಕು ದಿನದ ನರಳಾಟದ ಬಳಿಕ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದು, ಮಾಟ ಮಂತ್ರದ ಅನುಮಾನದಿಂದ ವಿಷ ಕುಡಿಸಿ ಕೊಲೆ ಮಾಡಲಾಗಿದೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪ ಮಾಡಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

ಜಿಲ್ಲೆಯ ಬೇಲೂರುತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ಒಡ ಹುಟ್ಟಿದ ಅಕ್ಕನಿಗೆ ತಮ್ಮನೇ ವಿಷ ಹಾಕಿ ಹತ್ಯೆ ಮಾಡಿದ ಆರೋಪ ಕೇಳಿ ಬಂದಿದೆ. ನಂಜಮ್ಮ(65) ಮೃತ ಅಕ್ಕ. ಆಕೆಯ ತಮ್ಮ ಮಂಜೇಗೌಡ, ಪತ್ನಿ ಲೀಲಮ್ಮ, ಸಹೋದರಿ ಸಾವಿತ್ರಮ್ಮ ಹಾಗೂ ಪುತ್ರ ಮಧು ಸೇರಿ ಫೆಬ್ರವರಿ 2ರಂದು ನಂಜಮ್ಮ ಮನೆಗೆ ನುಗ್ಗಿ ಹಲ್ಲೆ ಮಾಡಿ ಬಲವಂತವಾಗಿ ವಿಷ ಕುಡಿಸಿದ್ದಾರೆ. ತೀವೃವಾಗಿ ಅಸ್ವಸ್ಥಗೊಂಡ ನಂಜಮ್ಮನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರೂ ಸಂಜೆವರೆಗೂ ಅದಕ್ಕೆ ಅವಕಾಶ ನೀಡಿಲ್ಲ. ಊರಿಗೆ ಬಂದ ಆಂಬ್ಯುಲೆನ್ಸ್ ಅನ್ನು ಕೂಡ ವಾಪಸ್ ಕಳಿಸಲಾಗಿದೆ. ಸಂಜೆ ಕುಟುಂಬ ಸದಸ್ಯರು ಬೇಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹಾಸನದ ಹಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ನಂಜಮ್ಮ ಮೃತಪಟ್ಟಿದ್ದಾರೆ.

ಆಸ್ತಿ ವಿಚಾರವಾಗಿ ಉಂಟಾಗಿದ್ದ ಕಲಹದಿಂದ ನಂಜಮ್ಮ ಹಾಗೂ ಮಂಜೇಗೌಡ ಕುಟುಂಬ ಪರಸ್ಪರ ವೈರತ್ವ ಬೆಳೆಸಿಕೊಂಡಿದೆ. ಮಂಗೇಗೌಡನ ಮಗ ಸಂಪತ್ ತಿಂಗಳ ಹಿಂದೆ ಮೃತಪಟ್ಟಿದ್ದರಿಂದ ಆತನ ಸಾವಿಗೆ ನಂಜಮ್ಮ ಕುಟುಂಬ ಮಂತ್ರ ಮಾಡಿಸಿದ್ದೇ ಕಾರಣ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ ಹಲ್ಲೆ ಹಾಗೂ ವಿಷ ಕುಡಿಸಿ ಹತ್ಯೆಮಾಡಲಾಗಿದ್ದು ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಿ ಎಂದು ನಂಜಮ್ಮ ಸಂಬಂಧಿಕರು ಆಗ್ರಹಿಸಿದ್ದಾರೆ.

ಮಾಳೆಗೆರೆಯ ನಂಜಮ್ಮರ ತಂದೆಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದರಂತೆ. ಗಂಡು ಮಕ್ಕಳಾಗಿಲ್ಲ ಎಂದು ತಂದೆ ಮತ್ತೊಂದು ಮಧುವೆಯಾದಾಗ ಮಂಜೇಗೌಡ ಹಾಗೂ ಇನ್ನೊಬ್ಬಳು ಮಗಳ ಜನಿಸಿದ್ದಾರೆ. ತಂದೆಯಕಾಲಾನಂತರ ನಂಜಮ್ಮನ ತಾಯಿ ಹೆಸರಿಗೆ ಒಂದು ಎಕರೆ ಆಸ್ತಿ ಬಂದಿತ್ತು. ಆ ಆಸ್ತಿಯನ್ನು ನಂಜಮ್ಮನಿಗೆ ತಿಳಿಯದಂತೆ ಫೋರ್ಜರಿ ಮಾಡಿ ಮಂಜೇಗೌಡ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದರು. ಇದೇ ವಿಚಾರವಾಗಿ ಇಬ್ಬರ ಕುಟುಂಬದ ನಡುವೆ ಕಲಹ ಸೃಷ್ಟಿಯಾಗಿತ್ತು. ಆಸ್ತಿ ವ್ಯಾಜ್ಯ ಎಂಟು ವರ್ಷಗಳಿಂದ ಕೋರ್ಟ್​ನಲ್ಲಿ ಕೂಡ ನಡೆಯುತ್ತಿತ್ತು. ಈ ನಡುವೆ ಆಂಧ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಮಂಜೇಗೌಡ ಮಗ ಸಂಪತ್ ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದನಂತೆ. ಆದರೆ ಇದನ್ನೆ ನೆಪ ಮಾಡಿಕೊಂಡ ಮಂಜೆಗೌಡ ಕುಟುಂಬ ಆಸ್ತಿಗಾಗಿ ನೀನೇ ಮಾಟ ಮಾಡಿಸಿದ್ದೀಯ, ಅದರಿಂದಲೇ ನನ್ನ ಮಗ ಸಾವಿಗೀಡಾಗಿದ್ದಾನೆ ಎಂದು ನಿತ್ಯವೂ ಜಗಳ ಮಾಡುತ್ತಿದ್ದರಂತೆ.

ಫೆಬ್ರವರಿ 2ರಂದು ನಂಜಮ್ಮ ಪತಿ ಶಂಕರೇಗೌಡ ಜಮೀನಿನ ಬಳಿ ಹೋಗಿದ್ದಾಗ ಏಕಾಏಕಿ ದಾಳಿ ಮಾಡಿ ನಂಜಮ್ಮ ಮೇಲೆ ಅಟ್ಯಾಕ್ ಮಾಡಿದ್ದಾರೆ. ತಾನು ಮನೆ ಬಳಿ ಬಂದಾಗ ಮಂಜೆಗೌಡ ಮತ್ತು ಇತರೆ ಮೂವರು ನನ್ನ ಪತ್ನಿಯನ್ನ ಹಿಡಿದುಕೊಂಡು ವಿಷವನ್ನ ಬಾಯಿಗೆ ಹಾಕುತ್ತಿದ್ದರು. ಅದನ್ನ ತಡೆಯಲು ಯತ್ನಿಸಿದರು ಸಾಧ್ಯವಾಗಲಿಲ್ಲ ನನ್ನ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಶಂಕರೇಗೌಡ ಆರೋಪಿಸಿದ್ದಾರೆ. ಘಟನೆ ಸಂಬಂಧ ನಂಜಮ್ಮ ಪತಿ ಶಂಕರೇಗೌಡ ದೂರು ಆಧರಿಸಿ ಒಂದು ಕೇಸ್ ದಾಖಲಾಗಿದ್ದರೆ, ಮಂಜೆಗೌಡನ ದೂರು ಆಧರಿಸಿ ನಂಜಮ್ಮ ಮತ್ತು ಶಂಕರೇಗೌಡ ವಿರುದ್ದ ಕೂಡ ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಟ್ನಲ್ಲಿ ಅನಾರೋಗ್ಯದಿಂದ ಸಾವಿಗೀಡಾದ ಮಗನ ಸಾವಿಗೆ ಮಾಟ ಮಂತ್ರ ಕಾರಣ ಎಂದು ಶುರುವಾದ ಜಗಳ ಇದೀಗ ಓರ್ವ ಮಹಿಳೆಯ ಸಾವಿನಲ್ಲಿ ಅಂತ್ಯವಾಗಿದೆ. ವಿಷ ಕುಡಿಸಿ ಹತ್ಯೆ ಮಾಡಲಾಗಿದೆ ಎನ್ನೊ ಆರೋಪ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಪೊಲೀಷರ ನಿಷ್ಪಕ್ಷಪಾತ ತನಿಖೆಯಿಂದ ಸಾವಿನ ಹಿಂದಿನ ಅಸಲಿ ಸತ್ಯ ಹೊರ ಬರಬೇಕಿದೆ.

RELATED ARTICLES
- Advertisment -
Google search engine

Most Popular