ಗದಗ: ಕಾಣೆಯಾಗಿದ್ದ ಮಹಿಳೆ ಮೂರು ದಿನಗಳ ಕಾಲ ಪಾಳು ಬಾವಿಯೊಂದರಲ್ಲಿ ಬಿದ್ದು, ಬದುಕುಳಿದ ಘಟನೆ ನಡೆದಿದೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ 60 ಅಡಿ ಆಳಕ್ಕೆ ಬಿದ್ದ ಹಾಗೂ ಬದುಕುಳಿದ ಕಥೆಯೇ ರೋಚಕವಾದುದು.
ಬಾವಿಗೆ ಬಿದ್ದ ಮಹಿಳೆಯನ್ನು ತೋಟಗಂಟಿ ಗ್ರಾಮದ ನಿವಾಸಿ ಪಾರ್ವತಿ ವೀರಯ್ಯ ಕಲ್ಮಠ ಎಂದು ಗುರುತಿಸಲಾಗಿದೆ. ತನ್ನ ಮನೆಯಿಂದ ಒಂದೂವರೆ ಕಿಮೀ ದೂರದ ಜಮೀನಿನಲ್ಲಿ ಮಹಿಳೆ ಬಿದ್ದಿದ್ದಾಳೆ. ಮೂರು ದಿನಗಳ ಹಿಂದೆ ಮುಂಜಾನೆ 5 ಗಂಟೆಗೆ ಎದ್ದು ಮನೆ ಹೊರಗಿನ ಕೆಲಸ ಮಾಡುತ್ತಿದ್ದಾಗ, ಅಪರಿಚಿತ ವೃದ್ಧ ಮಹಿಳೆಯೊಬ್ಬಳು ಪಾರ್ವತಿಯನ್ನು ಭೇಟಿಯಾಗಿ, ನೀನು ನನಗೆ ಬೇಕು, ನಿನ್ನ ಮಾಂಗಲ್ಯ ಸರ, ಕೈ ಬಳೆ, ಕಾಲುಂಗರ ನನಗೆ ಬೇಕು ಎಂದು ಒತ್ತಾಯಿಸಿದ್ದಾಳೆ. ಆಗ ಪಾರ್ವತಿ ಅದನ್ನು ಕೊಡಲು ನಿರಾಕರಿಸಿದ್ದಾಳೆ. ಆಗ ಬಲವಂತವಾಗಿ ಆಕೆಯನ್ನು ಕುತ್ತಿಗೆ ಹಿಡಿದು ಎಳೆದೊಯ್ದು, ಈ ಬಾವಿಗೆ ಅಪರಿಚಿತ ಮಹಿಳೆ ತಳ್ಳಿದಳೆಂದು ಪಾರ್ವತಿ ಹೇಳಿರುವುದಾಗಿ ವರದಿಯಾಗಿದೆ.
ಬಾವಿಗೆ ಬಿದ್ದ ನಂತರ ಏನಾಯ್ತು ಎಂದು ಆಕೆಗೆ ಗೊತ್ತಾಗಲಿಲ್ಲ. ಬಾವಿಗೆ ಬಿದ್ದ 2ನೇ ದಿನಕ್ಕೆ ಮಳೆ ಬಂದಿದ್ದರಿಂದ, ಆಕೆಗೆ ಪ್ರಜ್ಞೆ ಬಂದಿದೆ. ನಂತರ ಎಷ್ಟೇ ಕೂಗಾಡಿದರೂ ಯಾರಿಗೂ ಕೇಳಿಸಿರಲಿಲ್ಲ. ಆದರೆ ಮೂರನೇ ದಿನ ಜಮೀನಿನ ಕೆಲಸಕ್ಕೆ ಬಂದವರು ಮಹಿಳೆಯ ಕಿರುಚಾಟದ ಸದ್ದು ಕೇಳಿ ಬಾವಿ ಬಳಿ ಬಂದಿದ್ದಾರೆ.
ಪಾರ್ವತಿ ಕಾಣೆಯಾಗಿದ್ದನ್ನು ನೋಡಿ ಮನೆಯವರು ಹುಡುಕಿ, ಹುಡುಕಿ ಸುಸ್ತಾಗಿ ಪೊಲೀಸರಿಗೆ ನಾಪತ್ತೆ ದೂರು ಕೂಡ ನೀಡಿದ್ದರು. ಆದರೆ ಬಾವಿಯಲ್ಲಿ ಆಕೆ ಪತ್ತೆಯಾದ ಬಳಿಕ ಆಕೆಯನ್ನು ತಕ್ಷಣವೇ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಮಾಂಗಲ್ಯ ಸರ, ಕೈ ಬಳೆ, ಎಡಕಾಲಿನ ಒಂದು ಉಂಗುರ ಇಲ್ಲದಿರುವುದನ್ನು ಗಮನಿಸಿದ ಕೆಲವರು ಅದೆಲ್ಲಿದೆ ಎಂದು ಆಕೆಯನ್ನು ಕೇಳಿದಾಗ, ಅದು ಎಲ್ಲಿದೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾಳೆ. ನಂತರ ಸ್ಥಳೀಯರು ಹಾಗೂ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಮೂರು ದಿನ ಉಪಾಸವಿದ್ದ ಆಕೆಗೆ ಉಪಾಹಾರ ನೀಡಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಯ ಬಗ್ಗೆ ಈಗ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ಪಾರ್ವತಿ ಹೇಳಿದ ಮಹಿಳೆ ಯಾರು ಎಂಬುದು ತಿಳಿಯದೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.