ಪುತ್ತೂರು: ತನ್ನ ಚಿಕ್ಕಮ್ಮನ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ, ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯನ್ನೇ ಅಪ್ರಾಪ್ತ ವಯಸ್ಕ ಬಾಲಕನೊಬ್ಬ ಹತ್ಯೆಗೈದ ಘಟನೆ ಉಪ್ಪಿನಂಗಡಿಯ ಪೆರ್ನೆ ಬಳಿ ನಡೆದಿದೆ.
ಪೆರ್ನೆಯ ಬಿಳಿಯೂರು ನಿವಾಸಿ ಹೇಮಾವತಿ (37) ಕೊಲೆಯಾದ ದುರ್ದೈವಿ. ಜೂ. 17ರಂದು ಹೇಮಾವತಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವಿಗೀಡಾಗಿರುವುದಾಗಿ ಹೇಳಲಾಗಿತ್ತು. ಆದರೆ ಅನುಮಾನದಿಂದ ಪೊಲೀಸರು ತನಿಖೆ ನಡೆಸಿದಾಗ ಇದೊಂದು ಕೊಲೆ ಎಂಬುದು ಪತ್ತೆಯಾಗಿದೆ.
ಹತ್ತನೇ ತರಗತಿ ವಿದ್ಯಾರ್ಥಿ 15 ವರ್ಷದ ಬಾಲಕನೇ ಹತ್ಯೆ ಮಾಡಿದ ಆರೋಪಿ. ಕೊಲೆಗೀಡಾದ ಹೇಮಾವತಿಯ ಅಕ್ಕನ ಮಗ ಜೂ. 17ರಂದು ಮನೆಗೆ ಬಂದಿದ್ದನೆನ್ನಲಾಗಿದೆ. ರಾತ್ರಿ ವೇಳೆ ಚಿಕ್ಕಮ್ಮನನ್ನೇ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಆಕೆ ಬಾಲಕನನ್ನು ತಡೆದು ಬುದ್ಧಿವಾದ ಹೇಳಿ ಮಲಗಿಸಿದ್ದರು ಎನ್ನಲಾಗಿದೆ.
ಆದರೆ ಬಳಿಕ ಬಾಲಕ ಚಿಕ್ಕಮ್ಮನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಾರನೇ ದಿನ ಆತನೇ ಕರೆ ಮಾಡಿ ಚಿಕ್ಕಮ್ಮನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದಿದ್ದಾನೆ. ಇದು ಅನುಮಾನಗೊಂಡು ಪೊಲೀಸರು ತನಿಖೆ ನಡೆಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.