ಬಾಗಲಕೋಟೆ: ಮಹಿಳೆಯೊಬ್ಬರು ದೇವಸ್ಥಾನದ ದ್ವಾರದಲ್ಲೇ ಪ್ರಾಣ ಬಿಟ್ಟ ಘಟನೆ ಇಲ್ಲಿನ ಜಮಖಂಡಿ ತಾಲೂಕಿನ ಚಂದ್ರಾದೇವಿ ದೇವಸ್ಥಾನದಲ್ಲಿ ನಡೆದಿದೆ. ದೇವಸ್ಥಾನದ ದ್ವಾರದ ಕಲ್ಲು ತಲೆಯ ಮೇಲೆ ಬಿದ್ದು ತರಕಾರಿ ಮಾರುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದಿಬಂದಿದೆ. ಸುರೇಖಾ ಕುಂಬಾರ (44) ಸಾವನ್ನಪ್ಪಿದ ದುರ್ದೈವಿ.
ಅಲಗೂರು ಗ್ರಾಮದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಅದರಂತೆ ಸಂತೆಯಲ್ಲಿ ತರಕಾರಿ ಮಾರಾಟ ಮಾಡುವ ಮಹಿಳೆ ಸುರೇಖಾ ಇಂದು ದೇವಸ್ಥಾನದ ದ್ವಾರದ ಬಳಿ ತರಕಾರಿ ಮಾರಾಟಕ್ಕೆ ಕುಳಿತಿದ್ದರು. ದೇವಾಲಯದ ಹತ್ತಿರ ಮಂಗಗಳು ಅಲ್ಲಲ್ಲಿ ಓಡಾಡಿಕೊಂಡಿದ್ದವು. ಈ ವೇಳೆ ಮಂಗವೊಂದು ದ್ವಾರದ ಮೇಲೆ ಇಟ್ಟಿದ್ದ ಸಿಮೆಂಟ್ ಕಲ್ಲಿನ ಮೇಲೆ ಕುಳಿತಿದೆ. ಆಗ ಕಲ್ಲು ಜಾರಿ ಸುರೇಖಾ ತಲೆಮೇಲೆ ಬಿದ್ದಿದೆ.
ಸುರೇಖಾ ತಲೆಗೆ ಗಂಭೀರ ಏಟಾಗಿದ್ದು, ಆಕೆಯ ತಲೆಯಿಂದ ತೀವ್ರ ರಕ್ತಸ್ರಾವ ಉಂಟಾಯಿತು. ಈ ವೇಳೆ ಸ್ಥಳದಲ್ಲೇ ಸುರೇಖಾ ಕೊನೆಯುಸಿರೆಳೆದಿದ್ದಾರೆ. ಜಮಖಂಡಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.