ಭೋಪಾಲ್: ಇಂದು ವಿಶ್ವ ಜನಸಂಖ್ಯಾ ದಿನಾಚರಣೆಯ ವಿಶೇಷ. ಈ ವಿಶೇಷ ದಿನದಂದೇ 35 ವರ್ಷದ ತಾಯಿಯೊಬ್ಬಳು 10ನೇ ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಜುಗ್ತಿ ಬಾಯಿ ಎಂಬ ಮಹಿಳೆ 10ನೇ ಮಗುವಿಗೆ ಜನ್ಮ ನೀಡಿದ್ದಾಳೆ. ಮೊದಲ ಮಗಳಿಗೆ 22 ವರ್ಷ ವಯಸ್ಸಾಗಿದ್ದು, ಆಕೆಗೆ 13ನೇ ವರ್ಷ ವಯಸ್ಸಿರುವಾಗಲೇ ಆಕೆ ಮೊದಲ ಮಗಳಿಗೆ ಜನ್ಮ ನೀಡಿದ್ದಳಂತೆ.
ಮೊಹಗಾಂವ್ ನಿವಾಸಿ ಅಕ್ಲು ಸಿಂಗ್ ಮರಾವಿ ಪತ್ನಿ ಜುಗ್ತಿ ಬಾಯಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಬಿರ್ಸಾ ಆಸ್ಪತ್ರೆಗೆ ಸಾಗಿಸಿದರು. ಆದರೆ ಅಲ್ಲಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ಆಕೆಗೆ ಆಪರೇಷನ್ ಮಾಡಿ ಹೆರಿಗೆ ಮಾಡಿಸಲಾಯಿತು. ಜುಗ್ತಿ ಬಾಯಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.