ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನವೆಂಬರ್ 2024 ರ ತಾರೀಕು 5 ಮತ್ತು 6, ಈ ಎರಡೂ ದಿನಗಳಲ್ಲಿ ವಿಶ್ವ ಕೊಂಕಣಿ ಸಮಾರೋಹ ಹಾಗೂ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ಜರುಗಲಿರುವುದು.
ತಾರೀಖು 5 ರಂದು ವಿಶ್ವ ಕೊಂಕಣಿ ಸಮಾರೋಹ ಕಾರ್ಯಕ್ರಮವನ್ನು ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ದಿಲೀಪ್ ಜಿ ನಾಯಕ್ ಉದ್ಘಾಟಿಸಲಿರುವರು. ಈ ಸಂದರ್ಭದಲ್ಲಿ ಹೆಸರಾಂತ ಚಲನಚಿತ್ರ ಕಲಾವಿದೆ ಪಂಢರಿಬಾಯಿ ಇವರ ಭಾವಚಿತ್ರವು ಕೊಂಕಣಿ ಕೀರ್ತಿಮಂದಿರದಲ್ಲಿ ಅನಾವರಣಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ “ಕೊಂಕಣಿ ರಂಗಭೂಮಿಯ ಇತಿಹಾಸ”ವೆಂಬ ಒಂದು ಸಂಶೋಧನಾ ಕೃತಿಯು ಬಿಡುಗಡೆಗೊಳ್ಳಲಿದೆ.ಈ ಕೃತಿಯನ್ನು ಗೋವಾದ ಹೆಸರಾಂತ ರಂಗಕರ್ಮಿ ಹಾಗೂ ಪ್ರಸಿದ್ಧ ಲೇಖಕ ಶ್ರೀ ಪುಂಡಲೀಕ ನಾಯಕ್ ಹಾಗೂ ಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ವಿಭಾಗದ ಪ್ರಾಧ್ಯಾಪಕ ಡಾ. ಹನುಮಂತ ಚೊಪ್ಡೆಕರ್ ಇವರುಗಳ ಸಂಪಾದತ್ವದಲ್ಲಿ ಶ್ರೀ ಮೈಕೆಲ್ ಡಿಸೋಜ ಪುಸ್ತಕ ಪ್ರಕಾಶನಾ ಅನುದಾನ ಬಳಸಿ ಸಿದ್ಧಪಡಿಸಲಾಗಿದೆ. ಇದಲ್ಲದೆ ಡಾ ಬಿ ದೇವದಾಸ ಪೈ ಇವರು ನಡೆಸುತ್ತಿರುವ ಕೊಂಕಣಿ ಭಾಷಾ ವಿಜ್ಞಾನದ ದೀರ್ಘಾವಧಿ ಸಂಶೋಧನೆಯ ಪ್ರಥಮ ಹಂತದ ಸಂಶೋಧನಾ ವರದಿಯೂ ಬಿಡುಗಡೆಗೊಳ್ಳಲಿದೆ.
ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದ ಅಂಗವಾಗಿ ತಾರೀಖು 5 ಮತ್ತು 6 ರ ಎರಡೂ ದಿನಗಳಲ್ಲಿ ವಿವಿಧ ವಿಚಾರ ಗೋಷ್ಟಿಗಳು ಜರುಗಲಿವೆ. ತಾರೀಖು 5 ರಂದು ಪೂ.11.00 ಕ್ಕೆ ನಡೆಯಲಿರುವ “ಸ್ವಾತಂತ್ರ್ಯೊತ್ತರ ಭಾರತದ ಶಿಕ್ಷಣ ದಲ್ಲಿ ಕೊಂಕಣಿ” ಈ ಗೋಷ್ಟಿಯ ಅಧ್ಯಕ್ಷತೆಯನ್ನು ಉಡುಪಿಯ ಶಿಕ್ಷಣಾಧಿಕಾರಿ ಡಾ. ಅಶೋಕ ಕಾಮತ ವಹಿಸಲಿರುವರು. ಇತರ ಐದಾರು ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದಾರೆ. ಅದೇ ಹೊತ್ತಿನಲ್ಲಿ ಸಮಾಂತರವಾಗಿ ಕವಿತಾ ಟೃಸ್ಟ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಅಖಿಲ ಭಾರತ ಕೊಂಕಣಿ ಕವಿತಾ ಸಾದರೀಕರಣದ ಅಂತಿಮ ಹಂತದ ಸ್ಪರ್ಧೆಯು ಜರುಗಲಿದೆ. ಅಪ. 2.00 ಗಂಟೆಗೆ ನಡೆಯಲಿರುವ :”ಕೊಂಕಣಿ ಸಾಹಿತ್ಯದಲ್ಲಿ ಹಾಸ್ಯಪ್ರಜ್ಞೆ” ಯೆಂಬ ವಿಚಾರ ಗೋಷ್ಟಿಯ ಅಧ್ಯಕ್ಷತೆಯನ್ನು ಎಚ್ ಎಮ್ ಪೆರ್ನಾಲ್ ರವರು ಭಾಗವಹಿಸಲಿರುವರು. ಹಾಗೂ ಗೋವಾದ ಹಿರಿಯ ಸಾಹಿತಿ ದೇವಿದಾಸ್ ಕದಮ್ ಭಾಗವಹಿಸಲಿರುವರು. ಅನಂತರ ಜರುಗಲಿರುವ ‘’ಕೊಂಕಣಿ ವಾಚನ ಸಂಸ್ಕೃತಿ’’ ಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ಕೊಂಕಣಿ ಸಾಹಿತಿ ಶ್ರೀ ಗೋಕುಲದಾಸ್ ಪ್ರಭುರವರು ವಹಿಸಲಿರುವರು.
ಸಂಜೆ 4.00 ರಿಂದ 6.00 ಗಂಟೆ ವರೆಗೆ ಜಾನಪದ ಕಲಾ ಸಂಸ್ಕೃತಿಯನ್ನು ಬಿಂಬಿಸುವಂತಹ ನೃತ್ಯ ಪ್ರದರ್ಶನವು ಜರುಗಲಿರುವುದು. ಮಲ್ಲಿಕಾರ್ಜುನ ಜಾನಪದ ಕಲಾ ತಂಡದಿಂದ ಕುಡುಬಿ ಗುಮ್ಮಟ ನೃತ್ಯ ಪ್ರದರ್ಶನ, ವಿದ್ಯಾರಂಗ ಮಿತ್ರ ಮಂಡಳಿ ಖಾರ್ವಿಕೇರಿ ಕುಂದಾಪುರ ತಂಡದವರಿಂದ ಸಾಂಪ್ರದಾಯಿಕ ಹೋಳಿ ನೃತ್ಯವನ್ನು ಮತ್ತು ಶ್ರೀ ಕಟಂಗಲ್ ದಾದಾ ಪೊಂಡಾ, ಗೋವಾ ಪಂಗಡದವರಿಂದ ಗೋವಾದ ಹೆಸರಾಂತ ದಿವಲಿ ನಾಚ್ ನೃತ್ಯ ಕಲಾ ಪ್ರದರ್ಶನಗೊಳ್ಳುವುದು.
ಮರುದಿನ ದಿನಾಂಕ 6 ರಂದು ಪೂ. 9.00 ಗಂಟೆಗೆ ಕೊಂಕಣಿಯ ವಿವಿಧ ಸಂಘ ಸಂಸ್ಥೆಗಳು ತಮ್ಮತಮ್ಮ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ಆನ್-ಲೈನ್ ಗೋಷ್ಟಿ ಕಾರ್ಯಕ್ರಮವಿರುತ್ತದೆ. ಆ ಕೂಡಲೆ ಪ್ರಧಾನ ಕಾರ್ಯಕ್ರಮ- ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೋವಾದ ಪ್ರಸಿದ್ಧ ಉದ್ಯಮಿ ಶ್ರೀ ಅವಧೂತ್ ತಿಂಬ್ಲೊ ಉಪಸ್ಥಿತರಿದ್ದು ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸಲು ಸ್ಥಾಪಿಸಲಾದ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪ್ರಶಸ್ತಿಯು ಗೋವಾದ ಹಿರಿಯ ಕೊಂಕಣಿ ಚಿಂತಕ ವಂ. ಮೌಜಿನ್ಹೊ ದೆ ಅಟೈಡೆ, ಇವರ ಅಪಾರ ಕೊಡುಗೆಯನ್ನು ಪರಿಗಣಿಸಿ ಪ್ರದಾನ ಮಾಡಲಾಗುವುದು.
ಈ ವರ್ಷದ ಅತ್ಯುತ್ತಮ ಕೊಂಕಣಿ ಕವಿತಾ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ -2024 ಗೋವಾದ ಕೊಂಕಣಿ ಕವಿ, ಲೇಖಕ ಪ್ರಕಾಶ ಡಿ ನಾಯಕ್ ಇವರ “ಮೊಡಕೂಳ್” ಯೆಂಬ ಕವಿತಾ ಕೃತಿಗೆ ಲಭಿಸಿದೆ.
ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ -2024 ಮಹಿಳಾ ವಿಭಾಗದ ಪ್ರಶಸ್ಥಿಯನ್ನು ಮುಂಬಯಿಯ ಶ್ರೀಮತಿ ವೀಣಾ ಅಡಿಗೆ ಇವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಪ್ರದಾನ ಮಾಡಲಾಗುವುದು. ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ -2024 ಸಂಘ ಸಂಸ್ಥೆ ವಿಭಾಗದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಮಂಗಳೂರಿನ ಸೇವಾ ಭಾರತಿ ಸಂಸ್ಥೆಗೆ ಪ್ರದಾನ ಮಾಡಲಾಗುವುದು. ಪುರಸ್ಕಾರವು ತಲಾ ಒಂದು ಲಕ್ಷ ರೂಪಾಯಿಗಳ ಸಮ್ಮಾನಧನ ಮತ್ತು ಫಲಕ, ಫಲ ತಾಂಬೂಲಗಳನ್ನು ಹೊಂದಿದೆ.
ವಿಶೇಷವಾಗಿ, ನವೆಂಬರ್ 5, ಮಹಾ ಪೋಷಕ ಶ್ರೀ ಟಿ, ವಿ, ಮೋಹನದಾಸ ಪೈ ಹಾಗೂ ನವೆಂಬರ 6, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿದ್ದ ದಿ. ಬಸ್ತಿ ವಾಮನ್ ಶೆಣೈಯವರ ಜನ್ಮದಿನಗಳಾಗಿದ್ದು ಈ ಸಮಾರೋಹ ಸಮಾರಂಭ ಹೆಚ್ಚು ಮಹತ್ವ ಪಡೆಯುತ್ತದೆ.
ಈ ಮೇಲಿನ ನಾಲ್ಕೂ ಪ್ರಶಸ್ತಿಗಳನ್ನು ದಿನಾಂಕ 6 ರಂದು ಬುಧವಾರ ಬೆಳಿಗ್ಗೆ 10.00 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಗುವುದು.
ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದ ಎರಡನೇ ದಿನದ ಸಮಾರಂಭದಲ್ಲಿ ಅಪರಾಹ್ನ ಗಂ. 2.00 ಕ್ಕೆ ಹೆಸರಾಂತ ನಾಟಕಕಲಾವಿದ ಕಾಸರಗೋಡು ಚಿನ್ನಾ ಹಾಗೂ ಎಚ್. ಸತೀಶ ನಾಯಕರವರಿಂದ “ಮನಾಂತರಂಗ” ವೆಂಬ ಕೊಂಕಣಿ ಹಾಸ್ಯ ಕಾರ್ಯಕ್ರಮ ಪ್ರದರ್ಶನಗೊಳ್ಳುವುದು.ಹಾಗೂ ಗೋವಾ ವಿಶ್ವವಿದ್ಯಾನಿಲಯದ ನಿವೃತ್ತ ಡೀನ್ ಡಾ. ಕಿರಣ್ ಬುಡ್ಕುಳೆ ಅಧ್ಯಕ್ಷತೆಯಲ್ಲಿ “ಕೊಂಕಣಿ ಸಂಶೋಧನೆ: ಸಾಧನೆ ಮತ್ತು ಸವಾಲುಗಳು” ವಿಚಾರಗೋಷ್ಟಿ ಜರುಗಲಿರುವುದು. ಗೋವಾದ ಪ್ರಾಧ್ಯಾಪಿಕೆ ಹಾಗೂ ಕಲಾವಿದೆ ಡಾ ತನ್ವಿ ಕಾಮತ್ ಬಾಂಬೋಳಕರ್ ಭಾಗವಹಿಸುವರು.
ಹೀಗೆ ಎರಡೂ ದಿವಸಗಳ ಕಾರ್ಯಕ್ರಮಗಳು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ ಯವರ ಮುಂದಾಳುತ್ವದಲ್ಲಿ ಹಾಗೂ ಉಪಾಧ್ಯಕ್ಷರಾದ ಕುಡ್ಪಿ ಜಗದೀಶ ಶೆಣೈ, ಗಿಲ್ಬರ್ಟ್ ಡಿ ಸೋಜ, ಕಿರಣ್ ಬುಡ್ಕುಳೆ, ಕಾರ್ಯದರ್ಶಿ ಡಾ ಕಸ್ತೂರಿ ಮೊಹನ್ ಪೈ, ಕೋಶಾಧಿಕಾರಿ ಬಿ.ಆರ್. ಭಟ್ ಹಾಗೂ ಇತರ ಟೃಸ್ಟಿಗಳ ಸಹಕಾರದೊಂದಿಗೆ ಜರುಗಲಿವೆ.
ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗುವ ವಿಶ್ವ ಕೊಂಕಣಿ ಸಮಾರೋಹ ಹಾಗೂ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಕರ್ನಾಟಕ, ಮುಂಬಯಿ, ಗೋವಾ, ಕೇರಳ ರಾಜ್ಯಗಳಿಂದ ಮಾತೃಭಾಷಾಭಿಮಾನಿಗಳು ಸಾಹಿತ್ಯಾಸಕ್ತರು ಭಾಗವಹಿಸಲಿರುವರು.
ವಿಶ್ವ ಕೊಂಕಣಿ ಸಮಾರೋಹ ಹಾಗೂ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ
RELATED ARTICLES