ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸೆ. 16 ರಂದು ವಿಶ್ವ ಓಝೋನ್ ದಿನಾಚರಣೆ
ನಡೆಯಿತು. ಆ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಕಳೆದ ಒಂದು
ವಾರವನ್ನು “ಓಝೋನ್ ಜಾಗೃತಿ ವಾರ” (ಓಝೋನ್ ಅವೇರ್ನೆಸ್ ವೀಕ್) ಎಂದು ಹೆಸರಿಸಿ
“ಓಝೋನ್ ಫಾರ್ ಲೈಫ್” ಎಂಬ ಶೀರ್ಷಿಕೆಯಡಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.
ವಿಜ್ಞಾನ ಸಂಘದ ವತಿಯಿಂದ ನಡೆಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಓಝೋನ್ ಪದರದ
ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕಾಗಿ ನಡೆದಿದ್ದು, ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ,
ಮುಖವರ್ಣಿಕೆ, ಪ್ರಬಂಧ ಸ್ಪರ್ಧೆ, ಸ್ಲೋಗನ್ ಬರವಣಿಗೆ, ಪೋಸ್ಟರ್ ತಯಾರಿಕೆ ಮುಂತಾದ
ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಈ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಓಝೋನ್
ತಳಹದಿಯ ರಕ್ಷಣೆ ಹಾಗೂ ಪರಿಸರ ಪರಿಪಾಲನೆಯ ಮಹತ್ವವನ್ನು ತಿಳಿಸುವಲ್ಲಿ ಸಫಲವಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿಯರಾದ ಮಮತಾ ಶೆಟ್ಟಿ, ಸುಖದಾದೇವಿ, ಸಂಧ್ಯಾ ವಿಜ್ಞಾನ
ಸಂಘದ ಸದಸ್ಯರು ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದರು.