ಪುತ್ತೂರು: ಚೇತನ ಫೌಂಡೇಶನ್ ಕರ್ನಾಟಕ, ಮತ್ತು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಆ.18 ರಂದು ಗಾಂಧಿ ಭವನ ಬೆಂಗಳೂರು ಇಲ್ಲಿ ಬೆಂಗಳೂರು ಪುಸ್ತಕ ಹಬ್ಬ ಹಾಗು ಕಾವ್ಯ ಸಮಾಗಮ -2024 ಕಾವ್ಯ ಚೇತನ ಪ್ರಶಸ್ತಿ, ಅಮೃತ ಭಾರತಿ ಪ್ರಶಸ್ತಿ ಮತ್ತು ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಲ್ಲಿ ಯುವ ಬರಹಗಾರ್ತಿ ದೀಪ್ತಿ ಅಡ್ಡತ್ತಂಡ್ಕ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಗೌರವ ಮತ್ತು ಕಾವ್ಯ ಚೇತನ ಪ್ರಶಸ್ತಿಗೆ ಭಾಜನರಾಗಿದ್ದಾರೆ . ತಮ್ಮ ವಿದ್ಯಾರ್ಥಿ ಹಂತದಲ್ಲಿಯೇ ಕ್ರಿಯಾಶೀಲ ಬರಹಗಾರ್ತಿಯಾಗಿದ್ದ ಇವರು ಯಕ್ಷಗಾನ, ಭರತನಾಟ್ಯ, ಯೋಗ ಮತ್ತು ಕ್ರೀಡೆ ಸೇರಿದಂತೆ ಬಹುಮುಖ ಪ್ರತಿಭೆ ಹೊಂದಿದವರಾಗಿದ್ದಾರೆ. ಇವರ ಸಾಧನೆಗೆ ಸುಳ್ಯ ಚಂದನ ಸಾಹಿತ್ಯ ವೇದಿಕೆಯ ಪ್ರತಿಭಾರತ್ನ ಪ್ರಶಸ್ತಿ, ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಫಿಲಂ ಫೆಸ್ಟಿವಲ್ 2024 ರ ಪುನೀತ ಪ್ರಶಸ್ತಿ ಮತ್ತು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಮಂಗಳೂರು ಇವರ ಕಲಾ ರತ್ನ ಪ್ರಶಸ್ತಿ ಪಡೆದುಕೊಂಡ ಇವರು,ತಮ್ಮ ಪದವಿ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಕಾಲೇಜಿನ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಇವರು ಕಾಸರಗೋಡಿನ ದೇಲಂಪಾಡಿ ಗ್ರಾಮದ ಅಡ್ಡತ್ತಂಡ್ಕ ಬಾಲಕೃಷ್ಣ ಗೌಡ ಮತ್ತು ಚಿನ್ನಮ್ಮ ದಂಪತಿಗಳ ಪುತ್ರಿ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಐಚ್ಚಿಕ ಕನ್ನಡ ದಲ್ಲಿ ಪದವಿಯನ್ನು ಪೂರೈಸಿ, ಪ್ರಸ್ತುತ ಬೆಂಗಳೂರಿನ ಪಬ್ಲಿಕ್ ಟಿವಿ ಉದ್ಯೋಗಿಯಾಗಿದ್ದಾರೆ.