ಮಂಗಳೂರು: ಇಲ್ಲಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಶನ್ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್‌ಫೀಲ್ಡ್ ನಗರದ ಮೇಯರ್ ಸ್ಟೀವನ್ ವಿ. ಫೋಂಟೊ ಆ.18 ಅನ್ನು ʻಯಕ್ಷಧ್ರುವ ಪಟ್ಲ ಫೌಂಡೇಶನ್ ಡೇʼ ಎಂದು ಘೋಷಿಸಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಲಾವಿದರು ಕನ್ನಡ ಸಂಘಟನೆಗಳ ಸಹಕಾರದಲ್ಲಿ ಅಮೆರಿಕದ ವಿವಿಧೆಡೆ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದಾರೆ. ಈ ಸಾಧನೆಗೆ ಮಿಲ್ವಾಕಿ ಕನ್ನಡ ಸಂಘದವರು ಸಹಕಾರ ನೀಡಿದ್ದಾರೆ.
ಇತ್ತೀಚೆಗೆ ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಜು. 27 ಅನ್ನು ಯಕ್ಷಧ್ರುವ ಪಟ್ಟ ಫೌಂಡೇಶನ್ ಡೇʼ ಎಂದು ಘೋಷಿಸಿದ್ದರು ಎಂದು ಪ್ರವಾಸ ತಂಡದಲ್ಲಿರುವ ಪಟ್ಟ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಟ ಸತೀಶ್ ಶೆಟ್ಟಿ ತಿಳಿಸಿದ್ದಾರೆ. ಅಮೆರಿಕ ತಿರುಗಟ ತಂಡದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರಾದ ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಾಣಿಯಾಣಿ, ಪ್ರೊ. ಎಂ.ಎಲ್. ಸಾಮಗ, ಸತೀಶ್ ಶೆಟ್ಟಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಮುಂತಾದವರಿದ್ದಾರೆ.