ಪುತ್ತೂರು: ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಒಂದಾದ ಶ್ರೀ ಗೆಜ್ಜೆಗಿರಿ ಮೇಳವು ಮಸ್ಕತ್ ಮತ್ತು ದುಬೈಯಲ್ಲಿ ಮಾತೆ ದೇಯಿ ಬೈದೆತಿ ಮತ್ತು ಧೂಮಾವತಿ ಅಮ್ಮನವರ ಯಕ್ಷಗಾನ ಪ್ರದರ್ಶನ ನೀಡಲಿದೆ. ವಿದೇಶಿ ನೆಲದಲ್ಲಿ ಪೂರ್ಣ ಪ್ರಮಾಣದ ಮೇಳವೊಂದು ಯಕ್ಷರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಪ್ರದರ್ಶನ ನೀಡಲಿದೆ.
ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಏ 19ರಂದು ಮಧ್ಯಾಹ್ನ 3:15ರಿಂದ ಮಸ್ಕತ್ ನ ರೂವಿ ಅಲ್ ಫಲಾಜ್ ಹೋಟೆಲ್ ಗ್ರಾಂಡ್ ಸಭಾಂಗಣದಲ್ಲಿ ಪ್ರದರ್ಶನ ನಡೆಯಲಿದೆ. ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಕಥೆಯುಳ್ಳ ಯಕ್ಷಗಾನ ನಡೆಯಲಿದೆ. ನಿತಿನ್ ತೆಂಕಕಾರಂದೂರು ವಿರಚಿತ, ಯೋಗೀಶ್ ಕುಮಾರ್ ಚಿಗುರುಪಾದೆ ಪದ್ಯ ರಚನೆಯ ಈ ಯಕ್ಷಗಾನ 225ನೇ ಪ್ರದರ್ಶನ ಕಾಣಲಿದೆ.
ಏ 2ರಂದು ಬಿಲ್ಲವ ಫ್ಯಾಮಿಲಿ ದುಬೈ ಕೂಟದ ವತಿಯಿಂದ ಬರ್ ದುಬೈಯ ಜದಫ್ ಸ್ವಿಸ್ ಇಂಟರ್ ನ್ಯಾಶನಲ್ ಸೈಂಟಿಫಿಕ್ ಸ್ಕೂಲ್ ನ ಹಾಲ್ ನಲ್ಲಿ ಸಂಜೆ 5ರಿಂದ 226ನೇ ಪ್ರಯೋಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಆಯ್ದ ಕಲಾವಿದರ ಒಗ್ಗೂಡುವಿಕೆಯಿಂದ ವಿದೇಶಿ ನೆಲದಲ್ಲಿ ಅನೇಕ ಯಕ್ಷಗಾನಗಳು ನಡೆದಿದ್ದವು. ಆದರೆ ಒಂದು ಮೇಳ ಪೂರ್ಣ ಪ್ರಮಾಣದಲ್ಲಿ ಈ ತನಕ ಪಾಲ್ಗೊಂಡಿಲ್ಲ. ಇದೇ ಮೊದಲ ಬಾರಿ ಗೆಜ್ಜೆಗಿರಿ ಮೇಳ ಪೂರ್ಣ ಪ್ರಮಾಣದಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿದೆ.