ಅ.24ರಂದು ನಿಟ್ಟೆಯಲ್ಲಿ ‘ಯಕ್ಷಗವಿಷ್ಟಿ’ ಆಹ್ವಾನಿತ ತಂಡಗಳ ಯಕ್ಷಗಾನ ಸ್ಪರ್ಧೆ‌

0
88

ನಿಟ್ಟೆ : ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘ ‘ಕಲಾಸಂಗಮ’ದ ವತಿಯಿಂದ ಆಯೋಜಿಸಲಾಗುತ್ತಿರುವ ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಗವಿಷ್ಟಿ–2026’ ಅಕ್ಟೋಬರ್ 24ರಂದು ನಿಟ್ಟೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ.

ಯಕ್ಷಗಾನದ ಸಾಂಪ್ರದಾಯಿಕ ಸೊಗಡನ್ನು ಯುವಪೀಳಿಗೆಗೆ ಪರಿಚಯಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಕಲೆಯ ಬಗೆಗಿನ ಆಸಕ್ತಿ ಮತ್ತು ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಸ್ಪರ್ಧೆಯು ನಾಲ್ಕನೇ ಆವೃತ್ತಿಗೆ ಕಾಲಿಟ್ಟಿದೆ.

ಈ ಬಾರಿಯ ಸ್ಪರ್ಧೆಯನ್ನು ‘ಇನವಂಶಚರಿತಾಮೃತಂ’ ಎಂಬ ಪರಿಕಲ್ಪನೆಯಡಿ ಆಯೋಜಿಸಲಾಗಿದ್ದು, ಸೂರ್ಯವಂಶದ ಐದು ರಾಜರಾದ ನಿಬಂಧನ, ದಂಡಕ, ದಿಲೀಪ, ಭಗೀರಥ ಹಾಗೂ ದಶರಥರ ಕಥಾನಕಗಳನ್ನು ಆಧರಿಸಿದ ಯಕ್ಷಗಾನ ಪ್ರಸಂಗಗಳು ರಂಗದಲ್ಲಿ ಅನಾವರಣಗೊಳ್ಳಲಿವೆ. ಐದು ಆಹ್ವಾನಿತ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಪೌರಾಣಿಕ ಕಥಾನಕಗಳ ಮೂಲಕ ಯಕ್ಷಗಾನ ಕಲೆಯ ವೈವಿಧ್ಯತೆಯನ್ನು ಪ್ರೇಕ್ಷಕರ ಮುಂದಿಡಲಿವೆ.

ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ಕೀರ್ತಿಶೇಷ ಸೂರಿಕುಮೇರು ಕೆ. ಗೋವಿಂದ ಭಟ್ಟರ ಸ್ಮರಣಾರ್ಥ ಈ ಬಾರಿಯ ಸ್ಪರ್ಧಾ ವೇದಿಕೆಗೆ ಅವರ ಹೆಸರನ್ನು ಇಡಲಾಗಿದೆ. ಅಲ್ಲದೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ ದಿ. ಎನ್. ವಿನಯ ಹೆಗ್ಡೆ ಅವರ ಸ್ಮರಣಾರ್ಥ ಈ ವರ್ಷದ ‘ಯಕ್ಷಗವಿಷ್ಟಿ’ಯನ್ನು ಸಮರ್ಪಿಸಲಾಗುತ್ತಿದೆ.

ಕಾರ್ಯಕ್ರಮವನ್ನು ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳದ ಖ್ಯಾತ ಯಕ್ಷಗಾನ ಕಲಾವಿದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಉದ್ಘಾಟಿಸಲಿದ್ದಾರೆ. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಣ್ಕರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಸುಳ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಯಕ್ಷಗಾನ ಪಠ್ಯಪುಸ್ತಕ ಸಮಿತಿಯ ಸದಸ್ಯರಾದ ಶ್ರೀ ಪ್ರಕಾಶ ಮೂಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಪರ್ಧೆಯ ನಂತರ ಆತಿಥೇಯ ನಿಟ್ಟೆ ಕಾಲೇಜಿನ ವಿದ್ಯಾರ್ಥಿ ಕಲಾವಿದರಿಂದ ವಿಶೇಷ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಾಂಪ್ರದಾಯಿಕ ಯಕ್ಷಗಾನ ಕಲೆಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಸಮನ್ವಯಗೊಳಿಸುವುದು ‘ಯಕ್ಷಗವಿಷ್ಟಿ’ಯ ವಿಶೇಷತೆಯಾಗಿದೆ. ಕಾಗದರಹಿತ ಮೌಲ್ಯಮಾಪನ ವ್ಯವಸ್ಥೆ, ಆನ್‌ಲೈನ್ ನೋಂದಣಿ ಹಾಗೂ 85 ಡೆಸಿಬೆಲ್ ಶಬ್ದಮಿತಿಯಂತಹ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ಪರ್ಧೆಯನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುತ್ತಿದೆ.

2023ರಿಂದ ವಿವಿಧ ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿರುವ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳು, ಇದೀಗ ಸ್ಪರ್ಧೆಯ ಸಂಘಟನೆಯಲ್ಲಿಯೂ ತಮ್ಮ ಕ್ರಿಯಾಶೀಲತೆ ಮತ್ತು ಸಾಂಸ್ಕೃತಿಕ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಯಕ್ಷಗಾನ ಕಲಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ.