Wednesday, September 11, 2024
Homeಮೂಡುಬಿದಿರೆಯಕ್ಷತೀರ್ಥ ಕಲಾಸೇವೆ, ನೂರಾಳ್ ಬೆಟ್ಟು - ಪಂಚಮ ಸಂಭ್ರಮ

ಯಕ್ಷತೀರ್ಥ ಕಲಾಸೇವೆ, ನೂರಾಳ್ ಬೆಟ್ಟು – ಪಂಚಮ ಸಂಭ್ರಮ

ಹೊಸ್ಮಾರ್ ಸಮೀಪದ ನೂರಾಳ್ ಬೆಟ್ಟು ಗ್ರಾಮದಲ್ಲಿ ಯಕ್ಷಗಾನೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ “ಯಕ್ಷತೀರ್ಥ ಕಲಾಸೇವೆ ” ಸಂಘಟನೆಯು ಇದೀಗ ಪಂಚಮ ಸಂಭ್ರಮದಲ್ಲಿದೆ . ದಿನಾಂಕ 25.08.2024 ನೇ ಭಾನುವಾರ ಅಪರಾಹ್ನ 3.00 ಗಂಟೆಗೆ ನಾರಾವಿಯ ಧರ್ಮಶ್ರೀ ಸಭಾಭವನದಲ್ಲಿ , ಡಾ.ಕೆ . ಮಂಜನಾಥ್ ಕಾಮತ್ ವೇದಿಕೆಯಲ್ಲಿ ಸುಪ್ರಸಿದ್ಧ ಕಲಾವಿದರಿಂದ ” ಶ್ರೀಕೃಷ್ಣ ಸಂಧಾನ ” ಯಕ್ಷಗಾನ ತಾಳಮದ್ದಳೆ ಹಾಗೂ ” ಯಕ್ಷ ತೆಲಿಕೆ ” ಎಂಬ ತುಳು ಯಕ್ಷಗಾನ ಜರುಗಲಿದೆ.
ವಿಶ್ವಕರ್ಮ ಸಮಾಜ ಸೇವಾಸಂಘ ( ರಿ ) ನೂರಾಲ್ ಬೆಟ್ಟು ಇವರ ವತಿಯಿಂದ ಜರುಗುತ್ತಿರುವ ಶ್ರೀ ವಿಶ್ವಕರ್ಮ ಪೂಜಾ ಸಂದರ್ಭದಲ್ಲಿ , 2013 ರಲ್ಲಿ ಸದಾನಂದ ಎಸ್ . ಆಚಾರ್ಯ , ನೂರಾಳ್ ಬೆಟ್ಟು ರವರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಿ ನಂತರ 4 ವರ್ಷಗಳ ಕಾಲ ಮುಂದುವರಿಸಿಕೊಂಡು ಜರುಗಿಸಲಾಯಿತು.
ನಂತರ ಹೊಸ್ಮಾರ್ ನಲ್ಲಿ 2 ವರ್ಷಗಳ ಕಾಲ ತಾಳಮದ್ದಳೆ ಕಾರ್ಯಕ್ರಮದ ಮೂಲಕ ಈ ತಂಡ ಯಕ್ಷಭಿಮಾನಿಗಳ ಗಮನ ಸೆಳೆದು ಮಿಂಚಿತು.. 2019 ರಲ್ಲಿ ಈ ಸಂಘಟನೆಯು ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಪ್ರಪ್ರಥಮವಾಗಿ ” ಯಕ್ಷತೀರ್ಥ ” ಬಿರುದನ್ನು ನೀಡಿ ಸಂಮಾನಿಸಿದರು . ಆಗ ಈ ಸಮಾಜದ ಆಗಿನ ಅಧ್ಯಕ್ಷರಾದ ಶ್ರೀ ಚೊಕ್ಕಣ್ಣ ಆಚಾರ್ಯ , ಹಿರಿಯ ಸಮಾಜ ಬಾಂಧವರು ಹಾಗೂ ಯಕ್ಷಗಾನ ಪೋಷಕರ ಅಭಿಮತದಂತೆ ಈ ಸಂಘಟನೆಯು
” ಯಕ್ಷತೀರ್ಥ ಕಲಾಸೇವೆ ” ಎಂಬ ಅಧಿಕೃತ ನಾಮಧೇಯದೊಂದಿಗೆ ಪ್ರತಿ ವರ್ಷ ನಾರಾವಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದೆ . ಈ ಸಲ ಯಕ್ಷತೀರ್ಥ ಎಂಬ ಹೆಸರಿನೊಂದಿಗೆ 5 ನೇ ವರ್ಷವೇ ಹೊರತು , ಈ ಸಂಘಟನೆಯ 12 ನೇ ಕಾರ್ಯಕ್ರಮ ಆಗಿದೆ.
ಯಕ್ಷತೀರ್ಥ ಕಲಾಸೇವೆಯು ಅನೇಕ ವೈಶಿಷ್ಟ್ಯಗಳೊಂದಿಗೆ ಗುರುತಿಸಿಕೊಂಡಿದೆ . 2015 ರಲ್ಲಿ *ಪೆರ್ಡೂರು ಮೇಳದ ” ಗೋಕುಲಾಷ್ಟಮಿ ” ಪ್ರಸಂಗದಲ್ಲಿ ಸಾಕ್ಷಾತ್ ಗೋಮಾತೆಯನ್ನೇ ರಂಗಸ್ಥಳಕ್ಕೆ ಪ್ರವೇಶ ಕೊಟ್ಟು , ಗೋಪೂಜೆ ಮಾಡಿದ್ದು , ಕಳೆದ ವರ್ಷ ” ಸುಧನ್ವ ಮೋಕ್ಷ ” ಪ್ರಸಂಗದಲ್ಲಿ ಅರ್ಜುನನಾಗಿ ತೀರ್ಥಹಳ್ಳಿ ಗೋಪಾಲ ಆಚಾರ್ಯರು , ಸಜೀವ ಕುದುರೆಯಲ್ಲಿ ಕುಳಿತು ರಂಗ ಪ್ರವೇಶ ಮಾಡಿದ್ದು ಮೊದಲಾದ ಸನ್ನಿವೇಶಗಳು ಚಿರಸ್ಮರಣೀಯ, ಅವಿಸ್ಮರಣೀಯ ಎಂಬುದು ಯಕ್ಷಗಾನ ಪ್ರೇಕ್ಷಕರ ಅಭಿಮತ . ತನ್ನ ಪ್ರತೀವರ್ಷದ ಕಾರ್ಯಕ್ರಮದಂದು ಕಲಾವಿದರನ್ನು , ಕಲಾ ಸಂಘಟಕರನ್ನು ,ಕಲಾಪೋಷಕರನ್ನು ಸಂಮಾನಿಸುವ ಸತ್ ಪರಿಪಾಠವನ್ನು ಈ ಸಂಘಟನೆ ಹೊಂದಿದೆ .ಈಗಾಗಲೇ ಸುಪ್ರಸಿದ್ಧ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯರರನ್ನು ದಂಪತಿ ಸಹಿತ ಸಂಮಾನಿಸಿದ್ದಾರೆ . ( ದಂಪತಿ ಸಹಿತ ಸಂಮಾನವು ಜನ್ಸಾಲೆಯವರಿಗೆ ಪ್ರಥಮ ). ಯಕ್ಷಗಾನದ ಉಳಿವಿಗೆ ಸಂಘಟಕರ ಪಾತ್ರ ಅತೀ ದೊಡ್ಡದು ಎಂದು ಪರಿಗಣಿಸಿ ಪ್ರತೀವರ್ಷ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ಸಂಘಟಕರು ” ಯಕ್ಷತೀರ್ಥ ಪ್ರಶಸ್ತಿ ” ಸ್ವೀಕರಿಸಿದ್ದಾರೆ . ಈ ವರ್ಷದ ಕಾರ್ಯಕ್ರಮದಂದು ಜೈನಮಠದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ , ಗಣ್ಯರ ಸಮಕ್ಷದಲ್ಲಿ , ಯಕ್ಷತೀರ್ಥ ಪೋಷಕ ಪ್ರಶಸ್ತಿ ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ತಂತ್ರಿಯವರಿಗೆ ನೀಡಲಿದ್ದಾರೆ . ಯಕ್ಷತೀರ್ಥ ಸಂಘಟಕ ಪ್ರಶಸ್ತಿಗೆ ಮೂಡುಬಿದಿರೆಯ ಯಕ್ಷಗಾನ ವಲಯದಲ್ಲಿ ಅಪಾರವಾಗಿ ದುಡಿದಿರುವ , ಯಕ್ಷಗಾನದ ಸಮರ್ಥ ಸಂಘಟಕ, ತಾಳಮದ್ದಳೆ ಕೂಟದ ಅರ್ಥದಾರಿ, ಬಯಲಾಟದ ವೇಷಧಾರಿ, ಯಕ್ಷಗಾನದ ಬಡಗು -ತೆಂಕು ತಿಟ್ಟಿನ ಎಲ್ಲಾ ಆಳಂಗಲ ಬಲ್ಲ,ಯಕ್ಷಗಾನದ ಅದ್ವಿತೀಯ ವಿಮರ್ಶಕ, ಲೇಖಕ,ಸಾಹಿತಿ ನಾಟಕಕರ್ತರೂ ಆದ, ಹಾಗೂ ಧಾರ್ಮಿಕ, ಶಿಕ್ಷಣ, ಬ್ಯಾಂಕಿಂಗ್, ವ್ಯವಹಾರ ಹಾಗೂ ಸಮಾಜ ಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ, ಎಂ.ಶಾಂತರಾಮ ಕುಡ್ವರು ಆಯ್ಕೆಯಾಗಿದ್ದಾರೆ .ಶ್ರೀ ಕುಡ್ವರು ಮೂಡಬಿದ್ರಿಯ ಯಕ್ಷಸಂಗಮದ ಇಡೀ ರಾತ್ರಿ ತಾಳಮದ್ದಳೆ ಕೂಟದ ಸಂಚಾಲಕರಾಗಿ ,ಇತ್ತೀಚಿಗಷ್ಟೇ ಯಕ್ಷ ಸಂಗಮ ಸಂಘಟನೆಯ ರಜತ ಮಹೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಯಕ್ಷೋಪಾಸನಂ ವಾರದ ಕೂಟ ಸಂಘದಲ್ಲಿಯೂ ಅತ್ಯಂತ ಸಕ್ರೀಯರಾಗಿರುವ , ಯಕ್ಷಗಾನ ಲೋಕದಲ್ಲಿ ಸವ್ಯಾಸಾಚಿಯೆOದೇ ಚಿರಪರಿಚಿತರಾಗಿರುವ ಯಕ್ಷಗಾನದ ಬಹು ಭಾಷ ಕಲಾವಿದ ಎಂ.ಶಾಂತರಾಮ ಕುಡ್ವರಿಗೆ ಈ ಪ್ರಶಸ್ತಿ ಅರ್ಹವಾಗಿಯೇ ದೊರಕಿದೆ ಎನ್ನಬಹುದು.
ಯಕ್ಷಗಾನ ಸಂಘಟನೆಯಲ್ಲಿ ಹೆಸರಾಗಿರುವ , ಯಕ್ಷಗಾನ ಪೋಷಕರು , ಅಭಿಮಾನಿಯಾಗಿರುವ ಸದಾನಂದ ಎಸ್. ಆಚಾರ್ಯ, ನೂರಾಳ್ ಬೆಟ್ಟುರವರ ನೇತೃತ್ವದಲ್ಲಿ ಪಂಚಮ ಸಂಭ್ರಮದಲ್ಲಿರುವ ಯಕ್ಷತೀರ್ಥ ಕಲಾಸೇವೆ ಸಂಘದಲ್ಲಿ
ಜಿ.ಎಸ್. ಪುರಂದರ, ಪುರೊಹಿತ್‌ ಮುನಿಯಾಲು, ಗಣೇಶ್ ಆಚಾರ್ಯ ಹೊಸ್ಮಾರ್ , ರತ್ನಾಕರ ಭಟ್ ಹೊಳೆಹೊದ್ದು, ರಾಜವರ್ಮ ಜೈನ್ ಹೊಸ್ಮಾರ್, ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷರಾದ ವಾಮನ ಆಚಾರ್ಯ ಮುಂತಾದ ಯಕ್ಷಗಾನ ಅಭಿಮಾನಿಗಳ *ಗಮನಾರ್ಹ . ಯಕ್ಷತೀರ್ಥ ಕಾರ್ಯಕ್ರಮದಲ್ಲಿ ಒಂದು ವಿಶೇಷವಾದುದನ್ನು ನಾವು ಇಲ್ಲಿ ಗಮನಿಸಬೇಕು. ಅದೇನೆಂದರೆ ಇವರು ಕಾರ್ಯಕ್ರಮ ನಡೆಸುವ ದಿನಾಂಕವನ್ನು, ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ, ಕಾಲಗಣನೆಯ ಪಂಚ ಅಂಗಾಗಳಾದ ದಿನದ ವಾರ,ತಿಥಿ , ನಕ್ಷತ್ರ , ಕರಣ , ಯೋಗ, ಪ್ರವರಗಳನ್ನು ಲೆಕ್ಕಾಚಾರ ಮಾಡಿಯೇ ಪುರೋಹಿತರಾದ ಜಿ.ಎಸ್.ಪುರಂದರ ಮುನಿಯಾಲ್ ರವರು ನಿಗದಿ ಪಡಿಸುತ್ತಾರೆ.” ಯಕ್ಷತೀರ್ಥ” ಕಾರ್ಯಕ್ರಮ ಎಂದರೆ , ನಾರಾವಿ ಪರಿಸರದಲ್ಲಿ ಹಬ್ಬದ ವಾತಾವರಣ ಎನ್ನಬಹುದು.

– ಎಂ. ರಾಘವೇಂದ್ರ ಭಂಡಾರ್ಕರ್ ಮೂಡುಬಿದಿರೆ

RELATED ARTICLES
- Advertisment -
Google search engine

Most Popular