Tuesday, April 22, 2025
Homeಮಂಗಳೂರುಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ 'ಯಕ್ಷೋತ್ಸವ' ಉದ್ಘಾಟನೆ

ಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ ‘ಯಕ್ಷೋತ್ಸವ’ ಉದ್ಘಾಟನೆ

ಯಕ್ಷಗಾನ ವಿಶ್ವದ ಸಮೃದ್ಧ ಕಲೆ: ಹೈಕೋರ್ಟ್ ನ್ಯಾಯವಾದಿ ಸುಧಾಕರ ಪೈ ಅಭಿಮತ

ಮಂಗಳೂರು: ‘ತ್ರೇತಾ ಯುಗದ ರಾಮನ ನಡೆಯನ್ನು, ದ್ವಾಪರ ಯುಗದ ಕೃಷ್ಣನ ನುಡಿಯನ್ನು ಕಲಿಯುಗದ ಜನಮಾನಸಕ್ಕೆ ಪ್ರಸ್ತುತ ಪಡಿಸುವ ಶಕ್ತಿಯಿರುವುದು ಯಕ್ಷಗಾನಕ್ಕೆ ಮಾತ್ರ. ಈ ಕಾರಣದಿಂದ ಅದು ವಿಶ್ವದ ಏಕೈಕ ಸಮೃದ್ದ ಕಲೆ’ ಎಂದು ಹೈಕೋರ್ಟ್ ಹಿರಿಯ ವಕೀಲ ಎಂ.ಸುಧಾಕರ ಪೈ ಅಭಿಪ್ರಾಯ ಪಟ್ಟಿದ್ದಾರೆ. ಮಾ.22ರಂದು ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 33ನೇ ವರ್ಷದ ಅಂತರ್ಕಾಲೇಜು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ-2025’ ಉದ್ಘಾಟಿಸಿ, ಅವರು ಮಾತನಾಡಿದರು.

‘ಕೇರಳದ ಕಥಕ್ಕಳಿ, ಆಂದ್ರಪ್ರದೇಶದ ಭಾಮಾ ವಿಲಾಸ ಮೊದಲಾದ ಸಮಕಾಲೀನ ಕಲೆಗಳಂತೆ ಕರಾವಳಿಯಲ್ಲಿ ಯಕ್ಷಗಾನ ಮೆರೆಯುತ್ತಾ ಬಂದಿದೆ. ಮೇಳಗಳು ದೇವಾಲಯಗಳ ಹೆಸರಿನಲ್ಲಿ ಹೊರಡುವ ಕಾರಣದಿಂದಾಗಿ ಯಕ್ಷಗಾನಕ್ಕೆ ದೈವಿಕ ನೆಲೆ ಇದೆ. ಶುದ್ಧ ಕನ್ನಡ ಭಾಷೆಯನ್ನು ಕಲಿಸುವ ಜತೆಗೆ ಸಂಸ್ಕೃತಿ, ಸಂಸ್ಕಾರ ಮೈಗೂಡಿಸಿಕೊಳ್ಳಲು ಅದು ಪೂರಕವಾಗಿದೆ’ ಎಂದವರು ಹೇಳಿದರು.

ಅಗಲಿದ ಕಲಾವಿದರ ಸ್ಮರಣೆ:
ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ, ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಕಳೆದ ಒಂದು ವರ್ಷ ಅವಧಿಯಲ್ಲಿ ಅಗಲಿದ ಯಕ್ಷಗಾನ ಕಲಾವಿದರನ್ನು ಸ್ಮರಿಸಿದರು. 2024 ಎಪ್ರಿಲ್ ತಿಂಗಳಿಂದೀಚೆಗೆ ನಿಧನರಾದ ಬಡಗು ತಿಟ್ಟಿನ ಸುಬ್ರಹ್ಮಣ್ಯ ಧಾರೇಶ್ವರ, ಬಾಳೆಗದ್ದೆ ಕೃಷ್ಣ ಹೆಗಡೆ, ತೆಂಕಿನ ಲೀಲಾವತಿ ಬೈಪಡಿತ್ತಾಯ, ಗಂಗಾಧರ ಜೋಗಿ ಪುತ್ತೂರು, ಕುಂಬ್ಳೆ ಶ್ರೀಧರ ರಾವ್, ಬಂಟ್ವಾಳ ಜಯರಾಮ ಆಚಾರ್ಯ, ಕೆ.ವಿ. ಗಣಪಯ್ಯ, ಬರೆ ಕೇಶವ ಭಟ್, ರಘುನಾಥ ರೈ ನುಳಿಯಾಲು, ಪಕಳಕುಂಜ ಶ್ಯಾಮ ಭಟ್, ರಾಮಣ್ಣ ಕಲ್ಮಡ್ಕ, ಪ್ರದೀಪ ರೈ ಬೆಟ್ಟಂಪಾಡಿ, ಗೋಪಾಲಕೃಷ್ಣ ಕುರುಪ್, ಕಲಾಪೋಷಕಿ ಕೀಲಾರು ವಿಜಯಲಕ್ಷ್ಮೀ ಅಮ್ಮ ಮೊದಲಾದ 14ಕ್ಕೂ ಅಧಿಕ ಮಂದಿ ಸಾಧಕರ ಜೀವನ – ಸಾಧನೆಗಳನ್ನು ಪರಿಚಯಿಸಿ ಅವರು ನುಡಿ ನಮನ ಸಲ್ಲಿಸಿದರು.

ಮಂಗಳೂರಿನ ಹಿರಿಯ ವಕೀಲರಾದ ಪಿ. ಸಂತೋಷ ಐತಾಳ ಹಾಗೂ ದಯಾನಂದ ರೈ ಮುಖ್ಯ ಅತಿಥಿಗಳಾಗಿದ್ದರು.

ಯಕ್ಷಗಾನ ತರಬೇತಿ ಕೇಂದ್ರ ಸ್ಥಾಪನೆಗೆ ಚಿಂತನೆ:
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ತಾರಾನಾಥ ಮಾತನಾಡಿ, ‘ಎಸ್‌ಡಿಎಂ ಕಾನೂನು ಹಾಗೂ ಉದ್ಯಮಾಡಳಿತ ಕಾಲೇಜಿನ ಕಟ್ಟಡ ವಿಸ್ತರಣೆಯಾಗುತ್ತಿದ್ದು, ನಾಗರಿಕ ಸೇವೆ ತರಬೇತಿ ಹಾಗೂ ಯಕ್ಷಗಾನ ತರಬೇತಿ ಕೇಂದ್ರ ಆರಂಭಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

’35 ನೇ ವರ್ಷದ ಯಕ್ಷೋತ್ಸವದಲ್ಲಿ ಇಲ್ಲಿನ ಯಕ್ಷೋತ್ಸವದಲ್ಲಿ ಪಾತ್ರ ವಹಿಸಿ ಪ್ರಸ್ತುತ ದೇಶದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಸಾಧಕರನ್ನು ಕರೆಸಿ ಅವರಿಂದಲೇ ಯಕ್ಷಗಾನ ಪ್ರದರ್ಶನ ಮಾಡಿಸುವ ಯೋಜನೆ ಇದೆ. ಯಕ್ಷೋತ್ಸವ ಸಂಘಟನೆ ಸುಲಭವಲ್ಲ. ಇದರ ಹಿಂದೆ ಬಹಳಷ್ಟು ಶ್ರಮವಿದೆ. ಆದರೂ ವರ್ಷದಿಂದ ವರ್ಷಕ್ಕೆ ಉತ್ತಮ ರೀತಿಯಲ್ಲಿ ನಡೆಯುತ್ತಾ ಬರುತ್ತಿದೆ’ ಎಂದವರು ನುಡಿದರು. ಯಕ್ಷೋತ್ಸವ ವಿಧ್ಯಾರ್ಥಿ ಸಂಚಾಲಕ ಶಿವತೇಜ ಐತಾಳ್ ಉಪಸ್ಥಿತರಿದ್ದರು.

ಯಕ್ಷೋತ್ಸವ ಸಂಚಾಲಕ ಪ್ರೊ. ಪುಷ್ಪರಾಜ್ ಕೆ. ಸ್ವಾಗತಿಸಿದರು. ಸಂಚಾಲಕಿ ಡಾ.ಶುಭಲಕ್ಷ್ಮೀ ಪಿ. ವಂದಿಸಿದರು. ಶ್ರೀಲಕ್ಷ್ಮೀ ಮಠದಮೂಲೆ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ಕಾಲ ನಡೆಯುವ ಯಕ್ಷೋತ್ಸವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ಒಟ್ಟು 10 ಕಾಲೇಜುಗಳು ಭಾಗವಹಿಸಿದ್ದು, ಒಟ್ಟಾಗಿ 8 ಪ್ರಸಂಗಗಳು ಪ್ರದರ್ಶನಗೊಂಡಿವೆ.

RELATED ARTICLES
- Advertisment -
Google search engine

Most Popular