ಉಡುಪಿ: ಸಂಪೂರ್ಣ ಹೊಂಡಮಯವಾದ ಆದಿಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಮಧರ್ಮ, ಚಿತ್ರಗುಪ್ತ ಹಾಗೂ ಪ್ರೇತಾತ್ಮದ ವೇಷ ತೊಟ್ಟ ವೇಷಧಾರಿಗಳು ಹೆದ್ದಾರಿ ಸಮಸ್ಯೆಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆದಿಉಡುಪಿಯ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು ವಾಹನ ಸಂಚಾರ ಮಾಡುವಾಗ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಅಪಾಯಕಾರಿ ಎನಿಸಿರುವ ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ವೇಷಧಾರಿಗಳು ವಿಶಿಷ್ಟ ರೀತಿಯ ಪ್ರದರ್ಶನ ನೀಡಿ ಆಡಳಿತ ಹಾಗೂ ಸಾರ್ವಜನಿಕರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರರಾದರು.
ಪ್ರೇತಾತ್ಮ ವೇಷ ಧರಿಸಿದ ಇಬ್ಬರು ಹೊಂಡಗಳ ಮೇಲಿಂದ ಜಿಗಿದರೆ, ಬಳಿಕ ಯಮಧರ್ಮ ಹಾಗೂ ಚಿತ್ರಗುಪ್ತ ಅವರ ಜಿಗಿತದ ಅಳತೆಯನ್ನು ಮಾಪನದಲ್ಲಿ ಅಳೆದರು. ಈ ಮೂಲಕ ಈ ಹೊಂಡಗಳು ಬಹಳ ಅಪಾಯಕಾರಿ ಎಂಬುದಾಗಿ ಬಿಂಬಿಸಿದರು.


