ಕಡಬ: ಜಿಲ್ಲೆಯ ಕಡಬ ತಾಲೂಕಿನಲ್ಲಿ ಮಂಗಳವಾರ 40.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ವರ್ಷದ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಇದು ಗರಿಷ್ಠ ತಾಪಮಾನವಾಗಿದೆ. ಮಂಗಳವಾರ ಮಧ್ಯಾಹ್ನ 2:30ರ ವೇಳೆಗೆ ಕಡಬದಲ್ಲಿ 40.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 40.7 ಡಿಗ್ರಿ ತಾಪಮಾನ ದಾಖಲಾಗಿತ್ತಾದರೂ, 45 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲ ಝಳವಿದ್ದಂತೆ ಅನುಭವಕ್ಕೆ ಬಂದಿತ್ತು ಎಂದು ಹವಾಮಾನ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ. ಏ.5ರಂದು ಇದೇ ತಾಲೂಕಿನಲ್ಲಿ ಉಷ್ಣಾಂಶ 39.9 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿತ್ತು. ಮಂಗಳೂರು ನಗರದಲ್ಲಿ ಗರಿಷ್ಠ 36 ಮತ್ತು ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ನಷ್ಟಾಗಿತ್ತು. ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಮಳೆಯಾಗಿದ್ದರೂ ವಾತಾವರಣದಲ್ಲಿ ತಂಪು ಮೂಡಿಲ್ಲ. ಬಿಸಿಲ ಝಳ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.