ಸಕಲೇಶಪುರ: ಎತ್ತಿನಹೊಳೆ ಸಮಗ್ರ ಕುಡಿಯುವ ನೀಡಿನ ಯೋಜನೆಯ ಮೊದಲ ಹಂತದ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಶುಕ್ರವಾರ ಕಾರ್ಯಕ್ರಮ ಆರಂಭಕ್ಕೆ ಕೆಲವೇ ನಿಮಿಷಗಳ ಮೊದಲು ಕುಸಿದುಬಿದ್ದಿದೆ. ಸಕಲೇಶಪುರ ತಾಲೂಕಿನ ಬೈಕೆರೆ ದೊಡ್ಡನಗರದ ಪಂಪ್‌ಹೌಸ್‌ನಲ್ಲಿ ಮಧ್ಯಾಹ್ನ 12ಕ್ಕೆ ಚಾಲನೆ ನೀಡಿದ ಬಳಿಕ, ಹೆಬ್ಬನಹಳ್ಳಿಯಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಅದಕ್ಕಾಗಿ ಹೂವು, ತಳಿರುತೋರಣಗಳಿಂದ ಅಲಂಕೃತ ಮಂಟಪ ನಿರ್ಮಿಸಲಾಗಿತ್ತು. ಆದರೆ ಬೆಳಿಗ್ಗೆ 11.15ಕ್ಕೆ ಮಂಟಪ ಕುಸಿದುಬಿದ್ದಿದೆ ಎಂದು ವರದಿಗಳಾಗಿವೆ.
ತುಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದ ಯೋಜನೆಯ ಪ್ರಥಮ ಹಂತದ ಕಾಮಗಾರಿ ಲೋಕಾರ್ಪಣೆ ವೇಳೆ ಇಂತಹುದೊಂದು ಅನಾಹುತವಾಗಿರುವುದು ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ ಈ ಕಾರ್ಯಕ್ರಮದ ವರದಿಗಾರಿಕೆಗಾಗಿ ಬರುತ್ತಿದ್ದ ಪತ್ರಕರ್ತರ ವಾಹನ ಅಪಘಾತಕ್ಕೀಡಾಗಿ ಏಳು ಮಂದಿಗೆ ಗಾಯಗಳಾಗಿವೆ.