ಹಾಸನ: ತುಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡುವ ಮೂಲಕ, ಎತ್ತಿನಹೊಳೆ ನೀರು ಬಯಲು ಸೀಮೆಯತ್ತ ಹರಿದೇ ಬಿಟ್ಟಿತು. ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ಯೋಜನೆಯ ಪ್ರಥಮ ಹಂತದ ಕಾಮಗಾರಿ ಲೋಕಾರ್ಪಣೆ ನಡೆಯಿತು. ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ, ದೊಡ್ಡನಾಗರದ 9ನೇ ಪಂಪ್ ಹೌಸ್ನಲ್ಲಿ ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿದರು. ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಸಿಎಂಗೆ ಸಾಥ್ ನೀಡಿದರು.
ಉದ್ಘಾಟನೆಗೂ ಮುನ್ನ ಸಿಎಂ ಪೂಜೆ ಸಲ್ಲಿಸಿದರು. ಇಂದಿನಿಂದ ಎತ್ತಿನಹೊಳೆ ಕಾಲುವೆಯಲ್ಲಿ ಪಶ್ಚಿಮಘಟ್ಟದ ನೀರು ಬಯಲು ಸೀಮೆಯತ್ತ ಹರಿಯಲಿದೆ.
ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ. ಶಿವಕುಮಾರ್ ನಿನ್ನೆಯಿಂದಲೇ ಎತ್ತಿನಹೊಳೆ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದ ಹೋಮ-ಹವನದಲ್ಲಿ ಭಾಗಿಯಾಗಿ, ಇಂದು ಬೆಳಿಗ್ಗೆ ಸಕಲೇಶಪುರ ತಾಲ್ಲೂಕಿನ ದೊಡ್ಡ ನಗರದ ಎತ್ತಿನಹೊಳೆ ಡಿಸಿ-3 ಪಂಪ್‌ಹೌಸ್‌ನಲ್ಲಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವರುಗಳಾದ ಡಾ. ಜಿ. ಪರಮೇಶ್ವರ್, ಕೆ.ಜೆ ಜಾರ್ಜ್, ಕೆ.ಎನ್ ರಾಜಣ್ಣ, ರಾಮಲಿಂಗಾರೆಡ್ಡಿ, ಕೆ.ಎಚ್ ಮುನಿಯಪ್ಪ, ಕೃಷ್ಣಬೈರೇಗೌಡ, ಎನ್.ಎಸ್ ಬೋಸರಾಜು, ಡಾ. ಎಂ.ಸಿ ಸುಧಾಕರ್, ಭೈರತಿ ಸುರೇಶ್, ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



