ಬೆಂಗಳೂರು: ಕಳೆದ ಶುಕ್ರವಾರವಷ್ಟೇ ಉದ್ಘಾಟನೆಗೊಂಡಿರುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದೆ. ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿಯ ಹಿನ್ನೆಲೆಯಲ್ಲಿ, ಯೋಜನೆಯ ಕಾರ್ಯ ಸಾಧ್ಯತೆ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಅರಣ್ಯ, ಪರಿಸರ ಮತ್ತು ತಾಪಮಾನ ಸಚಿವಾಲಯ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯ ಸರ್ವೆ ಸಂಖ್ಯೆ 2, 30 ಹಾಗೂ ಯಲ್ಲಾಪುರ ಗ್ರಾಮದ ಸರ್ವೆ ಸಂಖ್ಯೆ 34, 35 ಮತ್ತು 36ರ ಅರಣ್ಯ ಬಳಕೆ ಬಗ್ಗೆ ವರದಿ ನೀಡುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.
2020ರಲ್ಲಿ 26 ಎಕರೆ ಅರಣ್ಯ ಭೂಮಿ ಬಳಕೆಗೆ ವಿಶ್ವೇಶ್ವರ ಜಲ ನಿಗಮವು ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಸಹ 2024ರ ಜುಲೈನಲ್ಲಿ ಪತ್ರ ಬರೆದಿತ್ತು. ಈ ಪ್ರಸ್ತಾವದ ಕುರಿತು ಸ್ಪಷ್ಟನೆ ಹಾಗೂ ಹೆಚ್ಚುವರಿ ಮಾಹಿತಿ ಒದಗಿಸುವಂತೆ ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಸಚಿವಾಲಯ ಸೂಚಿಸಿದೆ.