ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಯೋಗದಿನಾಚರಣೆ
ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬೆಳಗ್ಗೆ 06:30 ಕ್ಕೆ 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗಾಗಿ, ಯೋಗ ತರಬೇತುದಾರರಾದ ಶರಾವತಿ ಇವರು ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು,ಪ್ರಾಂಶುಪಾಲರು,ಉಪಪ್ರಾಂಶುಪಾಲರು,ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.
ಬಳಿಕ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕಾನಂದ ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ರವಿಶಂಕರ್ ವಿ.ಎಸ್ ಇವರು ಭಾಗವಹಿಸಿ ಮಾತನಾಡುತ್ತಾ “ಯೋಗವು ಭಾರತೀಯ ಸಂಸ್ಕೃತಿಯಾಗಿದೆ. ಇದರ ಹುಟ್ಟು ಪ್ರಾಚೀನ ಭಾರತ.ಜೂನ್ 21ರಂದು ವರ್ಷದ ಅತೀ ದೀರ್ಘ ಅವಧಿಯ ಹಗಲು ಇರುವುದರಿಂದ ಅದೇ ದಿನ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ.ಯೋಗವು ನಮ್ಮ ಶರೀರದಲ್ಲಿ ಚೈತನ್ಯವನ್ನು ತುಂಬಿ ಹುರುಪನ್ನು ನೀಡುತ್ತದೆ. ನಮ್ಮ ದೈನಂದಿನ ಚಟುವಟಿಕೆಯಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಸಾಕಷ್ಟು ಕಾಯಿಲೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಇಂದಿನ ದಿನಗಳಲ್ಲಿ ಯೋಗವನ್ನು ಸ್ಪರ್ಧಾ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುತ್ತಿರುವುದು ಯೋಗದ ಮಹತ್ವವನ್ನು ತಿಳಿಸಿಕೊಡುತ್ತದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲರಾದ ದೇವಿಚರಣ್ ರೈ ಮಾತನಾಡುತ್ತಾ, “ಯೋಗವು ಶಾರೀರಿಕ ಮತ್ತು ಮಾನಸಿಕ ಸಮತೋಲನ ಹಾಗೂ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಯೋಗವು ಉಸಿರಾಟದ ನಿಯಂತ್ರಣವನ್ನು ಮಾಡುವುದರಿಂದ ಆಧುನಿಕ ಯುಗದಲ್ಲಿ ಬರಬಹುದಾದ ಕಾಯಿಲೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಿದೆ” ಎಂದು ಹೇಳಿದರು.ಕಾರ್ಯಕ್ರಮವನ್ನು ಉಪನ್ಯಾಸಕಿ ದಿವ್ಯ.ಜಿ. ಸ್ವಾಗತಿಸಿ ನಿರೂಪಿಸಿದರು. ದೈಹಿಕ ನಿರ್ದೇಶಕರಾದ ಡಾ. ಜ್ಯೋತಿ ವಂದಿಸಿದರು.