ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಯುವಕನೋರ್ವ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಘಟನೆ ನಡೆದಿದೆ.
ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಇಂದು ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಸಕಲ ಸಲಕರಣೆಗಳೊಂದಿಗೆ ಬಂದಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗಲಿಲ್ಲ.
ಈ ವೇಳೆ ಗ್ರಾಮದ ಆನಂದ್ ಎಂಬವರು ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ್ದಾರೆ. 5 ವರ್ಷದ ಚಿರತೆಯನ್ನು ಯುವಕ ಸೆರೆಹಿಡಿದಿದ್ದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಆನಂದ್ ಸಾಹಸಕ್ಕೆ ಇಡೀ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.