ಮಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಯರನ್ನು ಉದ್ದೇಶಿಸಿ ಹಣ ಕೊಡುತ್ತೇನೆ, ನನ್ನ ಜೊತೆಗೆ ಬರುತ್ತೀಯಾ? ಎಂದು ಅಸಭ್ಯವಾಗಿ ಕರೆಯುತ್ತಿದ್ದ ಯುವಕನೊಬ್ಬನನ್ನು ಯುವತಿಯರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಗರದ ಮಂಜೇಶ್ವರ ಗೋವಿಂದ ಪೈ ಸರ್ಕಲ್ ಬಳಿ ನಡೆದಿದೆ. ಬರ್ಮುಡಾ ಮತ್ತು ಕಪ್ಪುಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕನ ವರ್ತನೆಯಿಂದ ರೊಚ್ಚಿಗೆದ್ದ ಇಬ್ಬರು ಯುವತಿಯರು ಈ ಕೃತ್ಯ ಎಸಗಿದ್ದಾರೆ.
ರಸ್ತೆಯಲ್ಲಿ ಹೋಗುವ ಹುಡುಗಿಯರನ್ನೆಲ್ಲಾ ಹಣಕ್ಕೆ ಬರುತ್ತೀಯಾ ಎಂದು ಕರೆಯುತ್ತೀಯಾ? ಏನಿದರ ಅರ್ಥ? ನಿನ್ನ ತಾಯಿಗೂ ಈ ರೀತಿ ಹೇಳುತ್ತೀಯಾ? ಎಂದು ಯುವತಿಯರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆತನ ವರ್ತನೆಯ ದೃಶ್ಯವನ್ನು ಯುವತಿಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ತನ್ನ ಹತ್ತಿರ ಬಂದ ಆತನನ್ನು ಯುವತಿಯೊಬ್ಬಳು ಹಿಡಿಯಲು ಯತ್ನಿಸಿದಳು. ಆಗ ಆತ ಧರಿಸಿದ್ದ ಟೀ ಶರ್ಟ್ ತೆಗೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೂ ಛಲ ಬಿಡದೆ ಆತನನ್ನು ಹಿಡಿದ ಯುವತಿಯರು ಮಹಿಳಾ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯರ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.