ಮೂಲ್ಕಿ: ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅತಿಕಾರಿಬೆಟ್ಟು ನಿವಾಸಿ 20 ವರ್ಷದ ಕಾರ್ತಿಕ್ ಪೂಜಾರಿ ಭಾನುವಾರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾರ್ತಿಕ್ ಪ್ರೀತಿಸುತ್ತಿದ್ದ ಹುಡುಗಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದ ಮನನೊಂದಿದ್ದ ಕಾರ್ತಿಕ್ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾರ್ತಿಕ್ ಕೆಲವು ತಿಂಗಳಿನಿಂದ ಚಿತ್ರದುರ್ಗದ ಸಂಬಂಧಿಯೊಬ್ಬರ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ. ಮೂಲ್ಕಿಯಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಮೂಡುಬಿದಿರೆಯ ಬಾಲಕಿಯ ಜೊತೆ ಕಾರ್ತಿಕ್ ಗೆ ಪ್ರೀತಿ ಉಂಟಾಗಿತ್ತು. ಅಪ್ರಾಪ್ತ ವಯಸ್ಕರಾದುದರಿಂದ ವಿವಾಹಕ್ಕೆ ಅವಕಾಶವಾಗಿರಲಿಲ್ಲ.
ಈ ನಡುವೆ ಮೂಲ್ಕಿಯ ಅಜ್ಜಿ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ಮೂಡುಬಿದಿರೆಯ ಬಾಲಕಿಯನ್ನು ಮೂಡುಬಿದಿರೆಯ ಮನೆಗೆ ಕರೆದುಕೊಂಡು ಬರಲಾಗಿತ್ತು. ಕಾರ್ತಿಕ್ ಚಿತ್ರದುರ್ಗಕ್ಕೆ ಹೋಗಿದ್ದರು. ಇದರಿಂದ ಮಾನಸಿಕ ಒತ್ತಡಕ್ಕೊಳಗಾಗಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶನಿವಾರವಷ್ಟೇ ಊರಿಗೆ ಬಂದಿದ್ದ ಕಾರ್ತಿಕ್ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.