ತುಳು ಚಿತ್ರರಂಗದಲ್ಲಿ ಪ್ರವೋಷನ್ ವಿಷಯ ಬಂದಾಗ ಮೊದಲು ನೆನಪಾಗೋದು ಸೂರಜ್ ಮಂಗಳೂರು. ಇವರು ಯೂಟ್ಯೂಬರ್ ಮತ್ತು ಸಿನಿಮಾ ಪ್ರಚಾರಕರ್ತರು. ಸದ್ಯ ಯ್ಯೂಟುಬರ್ ಸೂರಜ್ ಮಂಗಳೂರು ಸಾವು ಬದುಕಿನ ಹೊರಟದಲ್ಲಿದ್ದ ಕಲಾವಿದನ ಕಷ್ಟಕ್ಕೆ ನೆರವಾಗಿದ್ದಾರೆ.
ಹಾಸ್ಯ ಕಲಾವಿದ ಗಾಳಿಪಟ ಖ್ಯಾತಿಯ ಹರೀಶ್ ಕಡಂದಲೆ ಇವರನ್ನು ತುಳು ನಾಟಕದಲ್ಲಿ ಜೊತೆಗೆ “ಬಲೆ ತೆಲೆಪಾಲೆ” ಹಾಸ್ಯ ಕಾರ್ಯಕ್ರಮದಲ್ಲಿ ನೋಡಿ ನಗೆ ಬೀರದವರು ಇರಲ್ಲ. ಆದರೆ ಬೇಸರ ಸಂಗತಿ ಎಂದರೆ ಅನಾರೋಗ್ಯದಿಂದ ಬಳಲುತ್ತಿದ್ದ ಹರೀಶ್ ಕಡಂದಲೆ ಆಸ್ಪತ್ರೆಗೆ ದಾಖಲಾಗಿ ವೆಚ್ಚ ಭರಿಸಲಾಗದೇ ಸಂಕಷ್ಟದಲ್ಲಿದ್ದರೂ. ಇವರ ವಿಚಾರ ತಿಳಿದ ಸೂರಜ್ ತಕ್ಷಣ ಸ್ಪಂದಿಸಿ ತನ್ನ ಚಾನೆಲ್ ಮೂಲಕ ಸಹಾಯ ಕೋರಿದ್ದರು. ಇವರ ಮನವಿಗೆ ಸ್ಪಂದಿಸಿದ ಜನರು ತಮ್ಮಲಾದ ಸಹಾಯ ಮಾಡಿದ್ದಾರೆ, ಹಾಗಾಗಿ ದಾನಿಗಳಿಂದ ಒಟ್ಟು 10ಲಕ್ಷಕ್ಕೂ ಅಧಿಕ ಮೊತ್ತ ಒಟ್ಟುಗೂಡಿಸಿ ಕಲಾವಿದನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಆಸ್ಪತ್ರೆ ವೆಚ್ಚ ಭರಿಸುವಷ್ಟು ಹಣ ಸಂಗ್ರಹವಾದ ಮೇಲೆ, “ಇನ್ನು ಹಣ ಹಾಕುವುದು ಬೇಡ ಎಂದು ಹಣ ಕೊಟ್ಟವರಿಗೆ ಧನ್ಯವಾದ ಅರ್ಪಿಸಿದ್ದಾರೆ”. ಡಿಸೆಂಬರ್ 4ರಂದು ಹರೀಶ್ ಕಡಂದಲೆ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಈ ಬಡ ಕಲಾವಿದನ ಬಾಳಿಗೆ ಸದ್ಯ ಸೂರಜ್ ಅವರ ಸಹಾಯ ವರದಾನವಾಗಿದೆ.
ಈ ಹಿಂದೆಯೂ ಸೂರಜ್ ಮಂಗಳೂರು ಸೂರಿಲ್ಲದ ಕಲಾವಿದರಿಗೆ ತಮ್ಮ ಕೈಲಾದ ಸಹಾಯಮಾಡಿದವರು. ಸಂದರ್ಶನಗಳ ಮೂಲಕ ತೆರೆಮರೆಯಲ್ಲಿದ್ದ ಕಲಾವಿದರನ್ನು ಲೈಮ್ ಲೈಟಿಗೆ ತರುವಲ್ಲಿಯೂ ಇವರ ಶ್ರಮವಿದೆ. ಯೂಟ್ಯೂಬ್ ಚಾನೆಲ್ ಮುಖಾಂತರ ಹಲವಾರು ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಿನಿಮಾ ರಂಗವನ್ನು ಕಟ್ಟುವ ಕೆಲಸವನ್ನು ತಮ್ಮದೇ ರೀತಿಯಲ್ಲಿ ಮಾಡುತ್ತಿರುವವರು ಇವರು. ಇಂದಿನ ಡಿಜಿಟಲ್ ಕ್ರಾಂತಿಯನ್ನು ಕೇವಲ ಹಣ ಸಂಪಾದಿಸುವುದಕ್ಕಷ್ಟೇ ಸೀಮಿತಗೊಳಿಸದೆ ಸೂರಜ್ ವಿಭಿನ್ನವಾಗಿ ನಿಂತಿದ್ದಾರೆ. ಅವರ ಈ ಸಮಾಜಮುಖೀ ಕೆಲಸ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯ.