ಮೂಡುಬಿದಿರೆ:ಇಲ್ಲಿನ ಪಾಲಡ್ಕ ಮತ್ತು ಜೋಡಿಕಟ್ಟೆ ಪರಿಸರದಲ್ಲಿ ಸಂಭವಿಸಿದ ಭಾರಿ ಗಾಳಿಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಸಾರ್ವಜನಿಕ ಆಸ್ತಪಾಸ್ತಿಗಳಿಗೆ ತೀವ್ರ ಹಾನಿಯಾಗಿದೆ.

ಪಾಲಡ್ಕ ಮಾವಿನಕಟ್ಟೆಯಲ್ಲಿ ಕಿರಣ್ ವರ್ಣಬೆಟ್ಟು ಅವರ ಆಟೋ ರಿಕ್ಷಾದ ಮೇಲೆ ಮರ ಬಿದ್ದಿದ್ದು, ವಾಹನ ಜಖಂಗೊಂಡಿದೆ.

ಇದೇ ಪರಿಸರದ ಹರೀಶ್ ಆಚಾರ್ಯ ಮಾವಿನಕಟ್ಟೆ ಹಾಗೂ ಡೇನಿಯಲ್ ಬರ್ಬೋಜಾ ಅವರ ಮನೆಗಳ ಮೇಲೆಯೂ ಮರಗಳು ಬಿದ್ದು ಮನೆಗಳಿಗೆ ಭಾರಿ ಹಾನಿ ಸಂಭವಿಸಿದೆ. ಜೋಡಿಕಟ್ಟೆ ರಸ್ತೆಗೆ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಪೂರ್ಣ ಬ್ಲಾಕ್ ಆಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯರು ರಸ್ತೆಗೆ ಬಿದ್ದಿದ್ದ ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

